ವಾರ್ತಾಭಾರತಿ ಹೆಸರು ಬಳಸಿ ʼಆಪರೇಶನ್ ಸಿಂಧೂರʼ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್: ನಿತಿನ್ ಶಾಮನೂರು, ಸಂತೋಷ್ ಹೆಗಡೆ, ಬೆಟ್ಟಂಪಾಡಿ ಚಂದ್ರ ಹಾಗೂ ನ್ಯೂಸ್ ಪುತ್ತೂರು ವೆಬ್ ಸೈಟ್ ವಿರುದ್ಧ ಎಫ್ ಐ ಆರ್ ದಾಖಲು
ಮಂಗಳೂರು: ವಾರ್ತಾಭಾರತಿ ದೈನಿಕದ ಹೆಸರು ಹಾಗೂ ಆಪರೇಷನ್ ಸಿಂಧೂರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಮೂವರು ದುಷ್ಕರ್ಮಿಗಳು ಹಾಗೂ ನ್ಯೂಸ್ ಪುತ್ತೂರು ವೆಬ್ ಸೈಟ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ತನ್ನ ಹೆಸರು, ವಾರ್ತಾಭಾರತಿ ದೈನಿಕದ ಹೆಸರು ಹಾಗೂ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಗ್ಗೆ ಸುಳ್ಳು ಮತ್ತು ಪ್ರಚೋದನಕಾರಿ ವದಂತಿ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ 'ವಾರ್ತಾಭಾರತಿ'ಯ ಸುದ್ದಿ ಸಂಪಾದಕರಾದ ಬಿ.ಎಂ.ಬಶೀರ್ ಅವರು ದೂರು ದಾಖಲಿಸಿದ್ದರು.
ನಿತಿನ್ ಶಾಮನೂರು ಎಂಬಾತನ ಫೇಸ್ ಬುಕ್ ಪೋಸ್ಟ್ ನಲ್ಲಿ 'ಆಪರೇಷನ್ ಸಿಂದೂರ್' : ಕನ್ನಡ ಪತ್ರಕರ್ತನ ಸೋದರ ಸಂಬಂಧಿಯ ಪತ್ನಿ ಫಿನಿಷ್' ಎಂಬ ಶೀರ್ಷಿಕೆಯಡಿ ಒಬ್ಬ ಮಹಿಳೆಯ ಫೋಟೋ ಹಾಗೂ ಸೈನಿಕರ ಫೋಟೋ ಜೊತೆ ಸುಳ್ಳು ಮಾಹಿತಿ ಬರೆಯಲಾಗಿದೆ. ಇದೇ ಫೇಸ್ ಬುಕ್ ಪೋಸ್ಟ್ ಅನ್ನು ಸಂತೋಷ್ ಹೆಗಡೆ ಎಂಬಾತನೂ ತನ್ನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ. Bettampady Chandra ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದಲೂ ಇದೇ ಸುಳ್ಳು ಸುದ್ದಿ ಪೋಸ್ಟ್ ಮಾಡಲಾಗಿದೆ. newsputtur.com ಎಂಬ ಹೆಸರಿನ ಒಂದು ವೆಬ್ ಸೈಟ್ ಕೂಡ ಇದೇ ಸುಳ್ಳು ಸುದ್ದಿಯನ್ನು ಹರಡಿದೆ ಎಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಅವರು ಉಲ್ಲೇಖಿಸಿದ್ದರು.
"ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಹರಡಿರುವ ಈ ಸುಳ್ಳು ಹಾಗೂ ಪ್ರಚೋದನಕಾರಿ ವದಂತಿಯಿಂದಾಗಿ ಜನರಿಗೆ ಸುಳ್ಳು ಮಾಹಿತಿ ರವಾನೆಯಾಗುತ್ತಿದೆ. ಈ ಸುಳ್ಳು ಸುದ್ದಿಯಿಂದ ಸಮಾಜದಲ್ಲಿ ಅಶಾಂತಿ, ಪ್ರಕ್ಷುಬ್ಧತೆ ಹರಡುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಇತ್ತೀಚಿನ ಕೆಲವು ಘಟನೆಗಳಿಂದ ಈಗಾಗಲೇ ಸೂಕ್ಷ್ಮ ವಾತಾವರಣವಿದ್ದು, ಇಂತಹ ಸುಳ್ಳು ಹಾಗೂ ಪ್ರಚೋದನಕಾರಿ ವದಂತಿಗಳಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಸಂತೋಷ್ ಹೆಗಡೆ, ನಿತಿನ್ ಶಾಮನೂರು, Bettampady Chandra ಹಾಗೂ newsputtur.com ವೆಬ್ ಸೈಟ್ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು" ಎಂದು ಬಿ.ಎಂ.ಬಶೀರ್ ಅವರು ದೂರಿನಲ್ಲಿ ಒತ್ತಾಯಿಸಿದ್ದರು.
ದೂರು ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು, ಮೂವರು ದುಷ್ಕರ್ಮಿಗಳು ಹಾಗೂ ನ್ಯೂಸ್ ಪುತ್ತೂರು ವೆಬ್ ಸೈಟ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ