ಪುತ್ತೂರು | ಪೋಕ್ಸೋ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಜಾಮೀನು ಮಂಜೂರು
ಪುತ್ತೂರು : ಮದುವೆಯಾಗುವ ಭರವಸೆ ನೀಡಿ ಅಪ್ರಾಪ್ತ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣದಡಿ ಬಂಧಿತನಾಗಿದ್ದ ಪುತ್ತೂರು ತಾಲೂಕಿನ ಕೆಯ್ಯೂರು ನಿವಾಸಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೆಯ್ಯೂರಿನ ಸಂತೋಷಗರ ನಿವಾಸಿ ಯತೀಂದ್ರ ಕುಮಾರ್ ವಿರುದ್ಧ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರು ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದರು.
ಸಂತ್ರಸ್ತೆ ನೀಡಿದ ದೂರಿನಲ್ಲಿ ಶಾಲೆಯಲ್ಲಿ ಕಲಿಯುವಾಗ ಆರೋಪಿಯ ಜೊತೆ ಪರಿಚಯವಾಗಿತ್ತು. ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ಆರೋಪಿಯು ಕರೆ ಮಾಡಿ ಮಾತನಾಡಲು ಕರೆಸಿಕೊಂಡು ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ರೀತಿ ಒಂದೆರಡು ಬಾರಿ ದೈಹಿಕ ಸಂಪರ್ಕ ನಡೆದಿದ್ದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಆಧಾರದ ಮೇಲೆ ಯತೀಂದ್ರ ಕುಮಾರ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯದ ನ್ಯಾ.ಸರಿತಾ ಅವರು ಜಾಮೀನು ನೀಡಿದ್ದಾರೆ.