ಸುಳ್ಯದಲ್ಲಿ ಬಾರೀ ಗಾಳಿ ಮಳೆ - ಹಲವು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ
ಸುಳ್ಯ: ತಾಲೂಕಿನಲ್ಲಿ ರವಿವಾರ ಬೆಳಿಗ್ಗೆಯಿಂದಲೇ ಭಾರೀ ಗಾಳಿ ಮಳೆ ಸುರಿದಿದ್ದು ದಿನವಿಡಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.
ಕಲ್ಲುಗುಂಡಿ ಸಮೀಪದ ಗೂನಡ್ಕದಲ್ಲಿ ರವಿವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಮುಖ್ಯರಸ್ತೆಯ ಬದಿಯಲ್ಲಿ ಬಾಡಿಗೆ ಮನೆಗಳ ಮೇಲೆ ಬೃಹತ್ ಸಾಗುವಾನಿ ಮರ ಬಿದ್ದು ಮೂರು ಮನೆಗಳ ಮೇಲ್ಛಾವಣಿ ಸಂಪೂರ್ಣ ನಾಶವಾಗಿದೆ. ಮನಯೊಳಗಿದ್ದ ಮಕ್ಕಳು ಸೇರಿದಂತೆ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಮನೆಗಳ ಮೇಲ್ಛಾವಣಿ ಶೀಟ್‍ಗಳು ಮನೆಯೊಳಗಿದ್ದ ಮಕ್ಕಳ ಮೇಲೆ ಬಿದ್ದು ಮಕ್ಕಳು ಸೇರಿದಂತೆ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಮನೆಗಳ ಶೀಟ್ ಮುರಿದ್ದು ಬಿದ್ದು ಮನೆಯೊಳಗೆ ಇರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಮಳೆಗೆ ಒದ್ದೆಯಾಗಿದೆ. ಮನೆಯೊಳಗೆ ಇರುವ ಬೆಡ್, ಎಲ್ಲಾ ಉಪಕರಣಗಳು ಸಂಪೂರ್ಣ ನಾಶವಾಗಿದ್ದು ಅಪಾರ ನಷ್ಟ ಉಂಟಾಗಿದೆ.
ಶುಕ್ರವಾರ ಬೆಳಿಗ್ಗೆ ಯಿಂದಲೇ ಆರಂಭಗೊಂಡ ಮಳೆ ಬಿಡುವು ನೀಡದೇ ಬರುತ್ತಲೇ ಇತ್ತು. ಶನಿವಾರ ಕೂಡ ಬಾರೀ ಮಳೆಯಾಗಿದೆ. ನಿರಂತರ ಮಳೆಗೆ ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಣ್ಣಿನ ರಸ್ತೆಗಳು ಕೆಸರುಮಯವಾಗಿದೆ. ಈ ರಸ್ತೆಗಳಲ್ಲಿ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಬಹುತೇಕ ಕಡೆಗಳಲ್ಲಿ ಅಸಮರ್ಪಕ ಚರಂಡಿಗಳಿಂದ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಎಡೆಬಿಡದೇ ಸುರಿಯುತ್ತಿರುವ ಬಾರೀ ಮಳೆಯ ಪರಿಣಾಮ ಮಂಡೆಕೋಲಿನ ಮಾರ್ಗ ಎಂಬಲ್ಲಿ ಮರ ಬಿದ್ದು ಮನೆ ಹಾನಿಗೊಂಡಿದೆ. ಮಾರ್ಗ ನಿವಾಸಿ ಅಮೀನಾ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಜಯನಗರದ ಶ್ರೀಧರ್ ಎಂಬವರ ಸ್ವಾಮಿ ಸೌಂಡ್ಸ್ ಇದರ ಗೋಡೌನ್‍ಗೆ ತೆಂಗಿನ ಮರದ ಗರಿಗಳು ಬಿದ್ದು ಸಿಮೆಂಟ್ ಶೀಟ್‍ಗಳು ಪುಡಿಯಗಿದೆ. ಇದರಿಂದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಬಂದು ಬೆಲೆ ಬಾಳುವ ಸೌಂಡ್ ಸಿಸ್ಟಮ್ಸ್ ಗಳು, ವಿದ್ಯುತ್ ಅಲಂಕಾರ ವಸ್ತುಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಬಾರೀ ಗಾಳಿಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಗೆಲ್ಲು ಬಿದ್ದು ಕಾರಿನ ಮುಂಭಾಗ ಗ್ಲಾಸ್ ಜಖಂಗೊಂಡ ಘಟನೆ ತೊಡಿಕಾನದ ಪಡ್ಪು ಎಂಬಲ್ಲಿ ನಡೆದಿದೆ. ಗೋವರ್ಧನ ಬೊಳ್ಳೂರು ಅವರು ಅರಂತೋಡಿನಿಂದ ತೊಡಿಕಾನಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಮರದ ಗೆಲ್ಲೊಂದು ಮುರಿದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಜಖಂಗೊಂಡಿದೆ. ಕಾರಿನಲ್ಲಿ ಗೋವರ್ಧನರವರು ಮಾತ್ರ ಇದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಬಂದ್ :
ಸುಳ್ಯ- ಬಂದಡ್ಕ ಅಂತಾರಾಜ್ಯ ರಸ್ತೆಯಲ್ಲಿ ಕನ್ನಡಿತೋಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಬಂದ್ ಆಗಿದೆ. ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದಿಂದ ರಸ್ತೆ ತಡೆ ಉಂಟಾಗಿತ್ತು. ಇದರಿಂದ ಅಂತಾರಾಜ್ಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದ್ದು ಎರಡೂ ಭಾಗದಲ್ಲಿ ವಾಹನಗಳ ಸರತಿ ಸಾಲು ಉಂಟಾಗಿದೆ. ಬಳಿಕ ಮರದ ತೆರವು ಕಾರ್ಯಚಾರಣೆ ನಡೆಸಿ ತೆರವುಗೊಳಿಸಲಾಯಿತು. ಅದೇ ರೀತಿ ಸುಳ್ಯ - ಸುಬ್ರಹ್ಮಣ್ಯ ರಸ್ತೆಯ ಗೋಂಟಡ್ಕ ಎಂಬಲ್ಲಿ ಮರ ಬಿದ್ದು ಕೆಲವು ತಾಸು ರಸ್ತೆ ಬಂದ್ ಆಗಿತ್ತು ಇದರಿಂದ ವಾಹನಗಳು ಸಾಲು ಗಟ್ಟಿ ನಿಂತ್ತಿತ್ತು. ಬಳಿಕ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.