ಸಂಸದ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ರಮಾನಾಥ ರೈ ಆಗ್ರಹ
ಮಂಗಳೂರು, ನ.10: ರಾಷ್ಟ್ರಗೀತೆ ಜನಗಣಮನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಬಿ. ರಮಾನಾಥ ರೈ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ, ಸಚಿವ ಸ್ಥಾನ, ಸ್ವೀಕರ್ ಹುದ್ದೆ ಸೇರಿದಂತೆ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.
ನಮ್ಮ ದೇಶದ ರಾಷ್ಟ್ರಗೀತೆಗೆ ಅಪಾರ ಇತಿಹಾಸವಿದ್ದು, ದೇಶದ ಜನಮಾನಸದಲ್ಲಿ ಇರುವಂತಹ ಹಾಡು ಆಗಿದೆ. ರಾಷ್ಟ್ರ ಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
1911ರ ಡಿ.11ರಂದು ಜನಗಣಮನ ಹಾಡನ್ನು ರವೀಂದ್ರನಾಥ ಟ್ಯಾಗೋರ್ ಬರೆದರು. 1911, ಡಿ.28ರಂದು ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿ ಹಾಡಲಾಗಿತ್ತು. 1947ರ ಆಗಸ್ಟ್ 14ರಂದು ಮಧ್ಯರಾತ್ರಿ ದೇಶ ಸ್ವತಂತ್ರವಾದಾಗ ಮೊದಲ ಬಾರಿ ಜನಗಣಮನ ಹಾಡಲಾಯಿತು. ಭಾರತದ ಸಂವಿಧಾನ ಸಭೆಯು 1950ರ ಜ.24ರಂದು ಜನಗಣ ಮನವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಿತ್ತು. ಇಂತಹ ಐತಿಹಾಸಿಕ, ಅಭಿಮಾನದ ರಾಷ್ಟ್ರಗೀತೆ ವಿರುದ್ಧ ಹೇಳಿಕೆ ನೀಡಿ ಕಾಗೇರಿ ಅವರು ಅವಮಾನಿಸಿದ್ದಾರೆ. ಇದು ರಾಷ್ಟ್ರಗೀತೆಯ ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರಗೀತೆ ಅವಮಾನಿಸಿದವರಿಗೆ ಮೂರ ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಈ ಅಪರಾಧವೆಸಗಿದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.
ಕಾಗೇರಿ ರಾಷ್ಟ್ರಗೀತೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಾರ ಕಳೆದರೂ ಕಾಂಗ್ರೆಸ್ ಪಕ್ಷ ಯಾಕೆ ಮೌನ ವಹಿಸಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಷ್ಟ್ರಗೀತೆಗೆ ಅವಮಾನ ಮಾಡಿದವನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುವ ಅವಕಾಶ ಎಲ್ಲರಿಗೂ ಇದೆ. ನಾನು ಒಬ್ಬ ನಾಗರಿಕನಾಗಿ ಸಂಸದ ಕಾಗೇರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ದ.ಕ. ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯೋಗೀಶ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪಡು, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಂಜುಳಾ ನಾಯಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಚಿತ್ತರಂಜನ್ ಶೆಟ್ಟಿ, ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾವು ಕುದ್ರೋಳಿ, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ. ಸುಧೀರ್, ಆರ್. ಸಜಿತ್ ಶೆಟ್ಟಿ, ಶಬೀರ್ ಸಿದ್ಧಕಟ್ಟೆ, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.