ಅತ್ಯಾಚಾರ ಆರೋಪ: ಕಾವೂರು ಠಾಣೆಯ ಕಾನ್ ಸ್ಟೇಬಲ್ ಸಹಿತ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಮಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಕಾವೂರು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರನಾಯ್ಕ್ ಹಾಗೂ ಆತನಿಗೆ ಸಹಕರಿಸಿದ ಆರೋಪದಲ್ಲಿ ಸಂತ್ರಸ್ತೆಯ ಪತಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಹಿಳೆಯೊಬ್ಬರು ಮಂಗಳವಾರ ಕಂಕನಾಡಿ ನಗರ ಠಾಣೆಗೆ ತೆರಳಿ ತನ್ನ ಪತಿಯು ಹಣಕ್ಕಾಗಿ ಒತ್ತಾಯ ಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ ಅದರ ವಿಡಿಯೋ ವನ್ನು ಚಿತ್ರೀಕರಿಸಿ ಇತರರೊಂದಿಗೆ ದೈಹಿಕ ಸಂಪರ್ಕ ನಡೆಸಬೇಕು. ಇಲ್ಲದಿದ್ದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದಾನೆ. ಹಾಗಾಗಿ ತನಗೆ ಪರಿಚಯವಿರುವ ಕಾವೂರು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರನಾಯ್ಕ್‌ನಿಗೆ ಈ ಬಗ್ಗೆ ತಿಳಿಸಿದ್ದೆ. ಆವಾಗ ಚಂದ್ರ ನಾಯ್ಕ್ ತನ್ನ ಮನೆಗೆ ಬಂದು ಪತಿಯ ಮೊಬೈಲ್‌ನಲ್ಲಿದ್ದ ಪೋಟೋ ಮತ್ತು ವಿಡಿಯೋವನ್ನು ಅಳಿಸಿದ್ದ. ನಂತರ ಪತಿಯ ಪ್ರೇರಣೆಯಂತೆ ಚಂದ್ರನಾಯ್ಕ್ ಕೂಡ ತನ್ನ ಇಚ್ಚೆಯ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಲಿಖಿತ ದೂರಿನಲ್ಲಿ ತಿಳಿಸಿದ್ದರು.
ಅದರಂತೆ ಪ್ರಕರಣ ದಾಖಲಿಸಿದ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿಗಳಾದ ಕಾನ್‌ಸ್ಟೇಬಲ್ ಚಂದ್ರನಾಯ್ಕ್ ಮತ್ತು ಸಂತ್ರಸ್ತೆಯ ಪತಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.