ಭಾರೀ ಮಳೆ: ದ.ಕ. ಜಿಲ್ಲೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಆಗಮನ
ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳನ್ನು ಬಳಸಿಕೊಳ್ಳಲಾಗುವುದು. ಈಗಾಗಲೆ ಎರಡೂ ತಂಡಗಳು ಜಿಲ್ಲೆಗೆ ಆಗಮಿಸಿವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ತಿಳಿಸಿದ್ದಾರೆ.
ಜಿಲ್ಲೆಯ ಮಳೆ ಪರಿಸ್ಥಿತಿಯ ಬಗ್ಗೆ ರವಿವಾರ ತನ್ನ ಅಧೀನ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಪತ್ತು ದಳದ ಒಂದು ತಂಡವು ಆಗಮಿಸಿದೆ. ಅದನ್ನು ಪುತ್ತೂರಿನಲ್ಲಿಡಲಾಗುವುದು. ರಾಜ್ಯ ವಿಪತ್ತು ದಳದ ಎರಡು ತಂಡವು ಆಗಮಿಸಿದ್ದು, ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಇಡಲಾಗುವುದು. ಈ ದಳಗಳು ಎಲ್ಲ ರೀತಿಯ ಸಲಕರಣೆ, ಅಗತ್ಯ ಯಂತ್ರೋಪಕರಣಗಳೊಂದಿಗೆ ಬರಲಿದೆ. ಪ್ರಾಕೃತಿಕ ವಿಪತ್ತುಗಳ ಸಂದರ್ಭ ಕಾರ್ಯಾಚರಿಸಲಿದೆ ಎಂದರು.
ವಿಪತ್ತು ನಿರ್ವಹಣೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಕಟ್ಟೆಚ್ಚರದಿಂದ ಇರಬೇಕು. ಯಾವುದೇ ಪ್ರಾಕೃತಿಕ ದುರಂತಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಬೇಕು. ಜೀವ ಹಾನಿ ತಪ್ಪಿಸಲು ಆದ್ಯತೆ ನೀಡಬೇಕು. ತಾಲೂಕು ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಿ ದುರಂತದ ತೀವ್ರತೆ ತಗ್ಗಿಸಬೇಕು. ಮೆಸ್ಕಾಂ, ಅರಣ್ಯ ಸಹಿತ ಸಂಬಂಧಿಸಿದ ಇಲಾಖೆಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ತೀವ್ರ ತೊಂದರೆಯಾಗಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಹವಾಮಾನ ಇಲಾಖೆಯು ಮುಂದಿನ 5 ದಿನಗಳ ಕಾಲ ದ.ಕ.ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಹಾಗಾಗಿ ಈ ಹಿಂದೆ ದುರ್ಘಟನೆ ಆಗಿರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಜೆಸಿಬಿ, ಬೋಟುಗಳನ್ನು ಸಿದ್ಧವಾಗಿಡಬೇಕು. ಶಾಲೆಗಳು ಶುರು ಆಗುವ ಮೊದಲು ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ತೆರವುಗೊಳಿಸಲು ಡಾ. ಕೆ. ಆನಂದ್ ಸೂಚಿಸಿದರು.
ಮಳೆಗಾಲ ಶುರುವಾಗುವ ಮೊದಲೇ ಮೀನುಗಾರಿಕೆ ತೆರಳಿದ್ದ ಬೋಟುಗಳು ಹವಾಮಾನ ವೈಪರೀತ್ಯಗಳಿಂದ ಹಿಂದಿರುಗಿ ಬರುತ್ತಿದ್ದು, ಈ ಬೋಟುಗಳಿಗೆ ಎನ್‌ಎಂಪಿಎ ಬಂದರಿಗೆ ಪ್ರವೇಶಿಸಲು ಅನುಮತಿ ನೀಡಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.