ಸೌಜನ್ಯ ಪ್ರಕರಣ: ನಿರ್ದೋಷಿ ಸಂತೋಷ್ ರಾವ್ ಮನೆಗೆ ಸುಣ್ಣ-ಬಣ್ಣ ಬಳಿದ ಹೋರಾಟಗಾರರ ತಂಡ
ಕಾರ್ಕಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ದಿಂದ ಖುಲಾಸೆಗೊಂಡಿದ್ದ ಕಾರ್ಕಳದ ಸಂತೋಷ್ ರಾವ್ ಮನೆಯನ್ನು ಸೌಜನ್ಯ ಪರ ಹೋರಾಟಗಾರರ ತಂಡ ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿಸಿದ್ದಾರೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಮತ್ತು ಸಮಾನ ಮನಸ್ಕರ ತಂಡ ಸಂತೋಷ್ ರಾವ್ ಮನೆಯ ಧೂಳು ತೆಗೆಸಿ, ಸುಣ್ಣ-ಬಣ್ಣ ಬಳಿಸಿದರು.
ನಿವೃತ್ತ ಶಿಕ್ಷಕರಾಗಿರುವ ಸಂತೋಷ್ ರಾವ್ ತಂದೆ ಸುಧಾಕರ ರಾವ್ ಅವರಿಗೆ ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟ ಬಳಿಕ, ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ರುವ ಸಂತೋಷ್ ರಾವ್ ಮನೆಯವರ ಕಡೆ ಸಂಬಂಧಿಕರೂ ಸೇರಿದಂತೆ ಗ್ರಾಮಸ್ಥರು ಕಾಲಿಡುತ್ತಿರಲಿಲ್ಲ. ಅಲ್ಲದೇ, ಮಗನ ಕೊರಗಿನಲ್ಲೇ ಸಂತೋಷ್ ತಾಯಿ ಕೂಡ 2016ರಲ್ಲಿ ನಿಧನ ಹೊಂದಿದ್ದರು. ಸಂತೋಷ್ ರಾವ್ ತಂದೆ ಸುಧಾಕರ ರಾವ್ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
ಜ್ಯೋತಿ ಬೆಳಗಿಸಿದ ಬಳಿಕ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ವ್ಯವಸ್ಥಿತ ಷಡ್ಯಂತ್ರದ ಮೂಲಕ ನಿಮ್ಮ ಮಗನನ್ನು ಸೌಜನ್ಯ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದು ಆಗಬಾರದಿತ್ತು. ಒಂದಲ್ಲ ಒಂದು ದಿನ ಎಲ್ಲ ಸತ್ಯ ಹೊರಬರಲಿದೆ. ಅಮಾಯಕನಾಗಿರುವ ನಿಮ್ಮ ಮಗನಿಗೆ ಸರ್ಕಾರದಿಂದ ಪರಿಹಾರ ದೊರಕಿಸಲು ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಒಡನಾಡಿ ಸ್ಟ್ಯಾನ್ಲಿ, ಈಗ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಹೇಳಿದೆ. ಹಾಗಾಗಿ, ಸಂತೋಷ್ ಕುಟುಂಬ ಸಂಬಂಧಿಕರು ಮತ್ತು ಗ್ರಾಮಸ್ಥರು ಅವರನ್ನು ಹತ್ತಿರ ಮಾಡಿಕೊಂಡು ಸಾಂತ್ವನ ಹೇಳಬೇಕು. ನಾವು ಮೈಸೂರಿನಲ್ಲಿರುವವರು. ಹಾಗಾಗಿ ನಮಗೆ ಎಲ್ಲ ದಿನ ಬರಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಈ ಊರಿನವರು ಮತ್ತು ಸಂಬಂಧಿಕರು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ವಿನಂತಿಸಿದರು.
ಗುರುವಂದನೆ ಆಯೋಜಿಸಿದ್ದಕ್ಕೆ ಸುಧಾಕರ ರಾವ್ ಹಾಗೂ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಧನ್ಯವಾದವಿತ್ತು, ಭಾವುಕರಾದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನವೀನ್ ರೈ, ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.