×
Ad

ಪರಿಶಿಷ್ಟ ಜಾತಿಗಳ ಸಮೀಕ್ಷೆ: ಆದಿ ದ್ರಾವಿಡರು ಉಪಜಾತಿ ‘ಗೊತ್ತಿಲ್ಲ’ವೆಂದು ನಮೂದಿಸಲು ಸಲಹೆ

Update: 2025-05-06 13:19 IST

ಮಂಗಳೂರು, ಮೇ 6: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದಿಂದ ಸಮೀಕ್ಷೆ ಆರಂಭವಾಗಿದ್ದು, ಶ್ರೀ ಸತ್ಯ ಸಾರಮಾನಿ ಕಾನದ- ಕಟದ ಆರಾಧಕ ತುಳು ಭಾಷಿಕ ಆದಿ ದ್ರಾವಿಡ ಸಮುದಾಯ ಮೂಲ ಜಾತಿಯಾಗಿಯೂ ಹಾಗೂ ಉಪ ಜಾತಿ ‘ಗೊತ್ತಿಲ್ಲ’ ಎಂದೇ ನಮೂದಿಸುವಂತೆ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಸಲಹೆ ನೀಡಿದೆ.

ನಗರದ ಪ್ರೆಸ್‌ಕ್ಲಬ್‌ ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ಈ ರೀತಿ ನಮೂದಿಸುವುದರಿಂದ ನಮ್ಮ ಸಮುದಾಯ ಮುಂದಿನ ದಿನಗಳಲ್ಲಿ ನಮ್ಮದು ಪ್ರತ್ಯೇಕ ಮೂಲ ಜಾತಿ ಅಥವಾ ಉಪಜಾತಿ ಇಲ್ಲದ ಆದಿ ದ್ರಾವಿಡ ಸಮುದಾಯ ಎಂದು ಪ್ರತ್ಯೇಕವಾಗಿ ಗುರುತಿಸಲು ಸಹಕಾರಿಯಾಗಲಿದೆ ಎಂದರು.

ಅಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನಮ್ಮ ಸಮುದಾಯದ ಉಪ ಜಾತಿಯನ್ನು ಸೇರ್ಪಡೆಗೊಳಿಸಲು ಇದು ಸಹಕಾರಿಯಾಗಲಿದೆ. ಇದಕ್ಕಾಗಿ ನಮ್ಮ ಸಮುದಾಯದ ನಡುವೆ ಒಮ್ಮತದ ನಿರ್ಧಾರಕ್ಕೆ ಬರುವ ಸಲುವಾಗಿ ಸಂಘ ಶ್ರಮಿಸುತ್ತಿದೆ. ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಜಾತಿಗಳ ಮೂಲ ಜಾತಿಯನ್ನು ಸೂಚಿಸುವಂತೆ ಕೇಳಿಕೊಳ್ಳಲಾಗುತ್ತದೆ. ಈ ವೇಳೆ ದ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ತುಳುನಾಡು ಮೂಲದ, ತುಳು ಭಾಷಿಕ, ಸತ್ಯಸಾರಮಾನಿ ಕಾನದ ಕಟದ ದೈವಗಳನ್ನು ಕುಲ ದೈವಗಳಾಗಿ ಆರಾಧಿಸುವ ಆದಿ ದ್ರಾವಿಡ ಸಮುದಾಯ ಈ ಬಗ್ಗೆ ಗಮನ ಹರಿಸಬೇಕು. ಸಮುದಾಯಕ್ಕೆ ಗೌರವಯುತ ಉಪಜಾತಿ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ಸಂಘ ಹೋರಾಟಕ್ಕೆ ಮುಂದಾಗಿದೆ. ಹಾಗಾಗಿ ಈ ಬಗ್ಗೆ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಸಮೀಕ್ಷೆ ಸಂದರ್ಭ ಉಪ ಜಾತಿ ಕಾಲಂನಲ್ಲಿ ಗೊತ್ತಿಲ್ಲ ಎಂಬುದಾಗಿಯೇ ನಮೂದಿಸಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ಶಿವಾನಂದ ಬಳ್ಳಾಲ್‌ಬಾಗ್, ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ರಾಜ್ಯ ಜತೆ ಕಾರ್ಯದರ್ಶಿ ಸುರೇಶ್ ಪಿ.ಬಿ. ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News