ಸರಕಾರಿ ಕೋಟಾದಲ್ಲಿ ಆಯ್ಕೆ: ಉತ್ತರಾಖಂಡದ ಪ್ರತಿಷ್ಠಿತ ಐಐಟಿಯಲ್ಲಿ ಪ್ರವೇಶ ಪಡೆದ ಮಂಗಳೂರಿನ ಮಿನಾನ್ ಮೊಯ್ದು ಹಸೈನ್
ಮಿನಾನ್ ಮೊಯ್ದು ಹಸೈನ್
ಮಂಗಳೂರು, ಜು.24: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಉತ್ತರಾಖಂಡ ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಗಳೂರು ಹೊರವಲಯದ ದೇರಳಕಟ್ಟೆಯ ಯುವಕನೊಬ್ಬ ಪ್ರವೇಶ ಪಡೆದಿದ್ದಾರೆ.
ಮೂಲತಃ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಅಡ್ಕಸ್ಥಳ ನಿವಾಸಿ ಮೊಯ್ದುಕುಂಞಿ ಮತ್ತು ಮಂಗಳೂರು ತಾಲೂಕಿನ ಹವ್ವಾ ಮೊಯ್ದು ದಂಪತಿಯ ಪುತ್ರನಾಗಿರುವ ಮಿನಾನ್ ಮೊಯ್ದು ಹಸೈನ್ (18) ಐಐಟಿಯಲ್ಲಿ ಪ್ರವೇಶ ಪಡೆದ ಯುವಕ.
ಮುಂಬೈ ಮತ್ತು ಮಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಕಲಿತ ಮಿನಾನ್ ಮೊಯ್ದು ಹಸೈನ್ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ವ್ಯಾಸಂಗ ಮಾಡಲು ಬಯಸಿದ್ದರು. ಆದರೆ ತನ್ನ ನಿರ್ಧಾರವನ್ನು ಬದಲಿಸಿ ಜೆಇಇ ಮೈನ್ಸ್ ಆ ಬಳಿಕ ಜೆಇಇ ಅಡ್ವಾನ್ಸ್ ಬರೆದು ಸರಕಾರಿ ಕೋಟಾದಲ್ಲಿ ಉತ್ತರಾಖಂಡದ ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಪಡೆದಿದ್ದಾರೆ. ಅದರಂತೆ ರೂರ್ಕಿಯ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶೀಘ್ರದಲ್ಲೇ ವ್ಯಾಸಂಗ ಆರಂಭಿಸಲಿದ್ದಾರೆ.
ನಾನು ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ವ್ಯಾಸಂಗ ಮಾಡಬೇಕೆಂದಿದ್ದೆ. ಬಳಿಕ ಮನಸ್ಸು ಬದಲಾಯಿಸಿ ಐಐಟಿ ಪ್ರವೇಶ ಪಡೆಯಲು ಬಯಸಿದೆ. ಹಾಗೇ ಜೆಇಇ ಮೈನ್ಸ್ ಮತ್ತು ಜೆಇಇ ಅಡ್ವಾನ್ಸ್ ಬರೆದು ಉನ್ನತ ವ್ಯಾಸಂಗ ಮಾಡಬೇಕೆಂದಿರುವೆ ಎಂದು ಮಿನಾನ್ ಮೊಯ್ದು ಹಸೈನ್ ಪ್ರತಿಕ್ರಿಯಿಸಿದ್ದಾರೆ.