×
Ad

ಇತಿಹಾಸದ ಮೇಲಿನ ಬೌದ್ಧಿಕ ದಾಳಿಯಿಂದ ಸಣ್ಣ ಸಂಸ್ಕೃತಿಗಳು ಅಪಾಯದಲ್ಲಿವೆ : ಪ್ರೊ.ಪುರುಷೋತ್ತಮ ಬಿಳಿಮಲೆ

Update: 2025-02-28 14:59 IST

ಮಂಗಳೂರು : ನಾಡಿನ ಮೂಲ ಕಲ್ಪನೆಗಳನ್ನು ನಾಶ ಮಾಡಿ ಇತಿಹಾಸದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿರುವುದು ದೇಶದಲ್ಲಿ ಹೆಚ್ಚುತ್ತಿದ್ದು, ಇದರಿಂದ ಸಣ್ಣ ಪುಟ್ಟ ಸಂಸ್ಕೃತಿಗಳು ದೊಡ್ಡ ಅಪಾಯಕ್ಕೆ ಸಿಲುಕಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.

ಹಿರಿಯ ರಂಗಕರ್ಮಿ, ಚಿತ್ರನಟ ಪ್ರಕಾಶ್‌ರಾಜ್ ನೇತೃತ್ವದ ನಿರ್ದಿಗಂತ ತಂಡದಿಂದ ನಗರದ ಅಲೋಶಿಯಸ್ ಕಾಲೇಜು ಆವರಣದಲ್ಲಿ ಆರಂಭಗೊಂಡಿರುವ ನಿರ್ದಿಗಂತ ಉತ್ಸವದ ಮೊದಲ ದಿನ ‘ಸೌಹಾರ್ದದ ಬಳಿ- ನಮ್ಮ ಕರಾವಳಿ’ ಎಂಬ ವಿಚಾರದ ಕುರಿತು ಆಶಯ ಭಾಷಣ ನೀಡಿದರು.

ಪುರಾಣವನ್ನು ತಿರುಚಿ ಇತಿಹಾಸವಾಗಿಸುವ ಪ್ರಯತ್ನದಲ್ಲಿ ನಾಡಿನ ವಿವೇಕ ನಾಶವಾಗುತ್ತಿದೆ. ನಾಡಿನ ಪುರಾಣಗಳನ್ನು, ಇತಿಹಾಸವನ್ನು ತಿರುಚುವ ತಂತ್ರಗಳ ಮೂಲಕ ರಾಜಕಾರಣಿಗಳು ತಮ್ಮ ಅಧಿಕಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಜನರು ರಾಜಕಾರಣಿಗಳ ಇಂತಹ ತಂತ್ರಗಾರಿಕೆಗೆ ಬಲಿಯಾಗಬಾರದು ಎಂದು ಅವರು ಹೇಳಿದರು.

ತುಳುನಾಡಿನ ಬೊಬ್ಬರ್ಯನನ್ನು ಉಲ್ಲೇಖಿಸಿ ಮಾತನಾಡಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಬೊಬ್ಬರ್ಯ ಎನ್ನುವುದು ಮುಸ್ಲಿಂ ದೈವ. ಅವನ ತಂದೆ ಸುಲಕಲ್ಲ ಮುರವ ಬ್ಯಾರಿ, ತಾಯಿ ಫಾತಿಮಾ. ಎಲ್ಲ ದಾಖಲೆಗಳಲ್ಲೂ ಹೀಗೇ ಇದೆ. ಆದರೆ ಇದನ್ನು ಅರಗಿಸಿಕೊಳ್ಳಲಾರದ ಕೆಲವರು ಇತ್ತೀಚೆಗೆ ಬಬ್ರುವಾಹನನ ಅವತಾರವೇ ಬೊಬ್ಬರ್ಯ ಎನ್ನುತ್ತಿದ್ದಾರೆ. ರಾಮ, ವಿಷ್ಣುವಿಗೆ ಅವತಾರಗಳಿವೆ. ಬಬ್ರುವಾಹನನಿಗೆ ಅವತಾರ ಇದೆಯೇ ಎಂದು ಪ್ರಶ್ನಿಸಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಇಂತಹ ಬೌದ್ಧಿಕ ದಾಳಿಗಳಿಂದ ನಾಡಿನ ಸಣ್ಣ ಸಂಸ್ಕೃತಿಗಳಿಗೆ ಅಪಾಯವಾಗುತ್ತಿದೆ. ದೈವ ಪರಂಪರೆಯನ್ನು ಇದ್ದುದನ್ನು ಇದ್ದ ಹಾಗೆಯೇ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ, ಹೀಗಾದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ ಎಂದವರು ಹೇಳಿದರು.

‘ತುಳುವಿನ ಬಲಿಯೇಂದ್ರನ ಕತೆಯನ್ನು ಉಲ್ಲೇಖಿಸಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಬಲಿಯೇಂದ್ರನ ಬಳಿ ವಾಮನ ಮಾತನಾಡುತ್ತಾ, ದೇವರು, ದೈವ, ನಾಗ, ಬೆರ್ಮೆರ್, ಜೈನರು, ಬ್ಯಾರಿಗಳು, ಕ್ರಿಶ್ಚಿಯನ್ನರಿಗೆ ಬದುಕಿಕೊಳ್ಳಲು ಜಾಗ ನೀಡುವ ಉಲ್ಲೇಖವಿದೆ. ಆದರೆ ಕೌದಿಯನ್ನು ಹರಿಯುವ ಶಕ್ತಿಗಳಿಗೆ ನಮ್ಮದೇ ನಾಡಿನ ಪುರಾಣಗಳ ಬಗ್ಗೆ ಮಾತ್ರವಲ್ಲ ದೇವರ ಬಗ್ಗೆಯೂ ಗೌರವ ಇಲ್ಲ. ದೇವರ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಗೌರವವೇ ಇಲ್ಲ. ಯಾವ ದೇವರನ್ನು ನಾವು ಪೂಜಿಸುತ್ತೇವೋ ಅದರ ಬಗ್ಗೆ ಗೌರವ ಇಲ್ಲದೆ ಇದ್ದಾಗ ದೈವ, ದೇವರ ಎಂಬುದು ಕೂಡಾ ವ್ಯಸನವಾಗುತ್ತದೆ. ಇದು ಕೋಮುವಾದವನ್ನು ಬಿತ್ತುವ ಬೃಹತ್ ಶಕ್ತಿಯಾಗಿ ತುಳುನಾಡಿನಲ್ಲಿ ಮಾತ್ರವಲ್ಲದೆ ದೇಶದಲ್ಲಿ ಬೆಳೆಯುತ್ತಿದೆ. ತುಳುನಾಡಿನ ವಾಮನ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತರ 600ಕ್ಕೂ ಅಧಿಕ ದೈವಗಳು ಕರಾವಳಿಗೆ ವಿವೇಕವನ್ನು ನೀಡಿವೆ. ಕರಾವಳಿಯ ಪುರಾಣ ಹಾಗೂ ಪಾಡ್ದನಗಳು ನೀಡಿರುವ ವಿವೇಕ ನಮ್ಮನ್ನು ನಡೆಸುವ ಶಕ್ತಿ ಹಾಗೂ ವರ್ತಮಾನಕ್ಕೆ ನಾಡಿನ ಬೆಳಕಾಗಿರಬೇಕು ಎಂದು ಅವರು ಹೇಳಿದರು.

18ನೇ ಶತಮಾನದಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಕರಾವಳಿಗೆ ಬಂದು ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದರಿಂದ ಹೆಚ್ಚಿನವರು ವಿದ್ಯಾವಂತರಾದರು. ಇತ್ತೀಚಿನ ವರ್ಷಗಳಲ್ಲಿ ಚರ್ಚ್‌ಗಳಿಗೆ ದಾಳಿ ನಡೆಸಿದ ಜನರಿಗೆ ಅವರ ಪೂರ್ವಜರು ಕ್ರಿಶ್ಚಿಯನ್ ಶಾಲೆಗಳಲ್ಲಿ ಕಲಿತದ್ದು ಎಂಬ ಅರಿವು ಇರುತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದರು.



ಭಾರತವೆಂಬುದು ಬಣ್ಣ ಬಣ್ಣದ ರಂಗೋಲಿ. ರಂಗೋಲಿಗೆ ಹೆಚ್ಚು ಬಣ್ಣ ಹಾಕಿದಷ್ಟು ಅದರ ಚೆಲುವು ಇಮ್ಮಡಿಸುತ್ತದೆ. ಆದರೆ, ಅದರ ಬಣ್ಣವನ್ನು ಕಡಿಮೆಯಾಗಿಸಿ ಒಂದು ಬಣ್ಣಕ್ಕೆ ಇಳಿಸಿದರೆ ಅದು ರಂಗೋಲಿಯಾಗಿ ಉಳಿಯದು. ಆದರೆ ಇಂದು ಆ ಭಾರತವೆಂಬ ರಂಗೋಲಿಯ ಬಣ್ಣ ಜತೆ ಚೆಲ್ಲಾಟವಾಡಲಾಗುತ್ತಿದೆ. ಬಣ್ಣಗಳನ್ನು ನಗಣ್ಯಗೊಳಿಸಿ ಒಂದು ಬಣ್ಣವಾಗಿಸುವ ಕಾರ್ಯ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಮತ್ತೆ ರಂಗೋಲಿ ಹಾಕುವ, ಮತ್ತೆ ಕೌದಿಯನ್ನು ಹೊಲಿಯುವ ಕಾರ್ಯ ನಿರ್ದಿಗಂತದ ಮೂಲಕ ನಡೆಯುತ್ತಿದ್ದು, ಇದು ಭಾರತಕ್ಕೆ ಸಂದೇಶವಾಗಲಿ ಎಂದು ಪುರುಷೋತ್ತಮ ಬಿಳಿಮಲೆ ಆಶಯ ವ್ಯಕ್ತಪಡಿಸಿದರು.

‘ಈಗಾಗಲೇ ಕರಾವಳಿಯ ಮೂಲನಿವಾಸಿ ತಳ ಸಮುದಾಯಗಳ ಸಂಖ್ಯೆ, ಭಾಷೆ, ಸಂಸ್ಕೃತಿ ನಶಿಸುತ್ತಿದೆ. ಈ ಸಮುದಾಯಗಳೀಗ ಬೌದ್ಧಿಕ ದಾಳಿಯ ಪರಿಣಾಮವಾಗಿ ಹಿಂದುತ್ವದ ಕಡೆಗೆ ಸಾಗುತ್ತಿವೆ ಎಂದು ಹೇಳಿದ ಅವರು, ವಿದೇಶಿಗರು ನೇರವಾಗಿ ಕಡಲ ಮಾರ್ಗದ ಮೂಲಕ ಆಗಮಿಸಿ ನೆಲೆನಿಲ್ಲಲು ಆರಂಭಿಸಿದ ಬಳಿಕ ಸಮ್ಮಿಶ್ರ ಸಂಸ್ಕೃತಿ ಬೆಳೆದು ಕರಾವಳಿ ಸಂಸ್ಕೃತಿಯು ಕರ್ನಾಟಕದ ಇತರೆಡೆಗಳಿಂದ ಭಿನ್ನವಾಗಲು ಕಾರಣವಾಯಿತು. ಈ ನಡುವೆಯೂ ದೈವ ದೇವರುಗಳ ಪರಂಪರೆಯನ್ನು ಈ ನಾಡು ಬಿಟ್ಟುಕೊಟ್ಟಿಲ್ಲ. ಆದರೆ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ಸ್ಥಾಪಿಸಿ ಪರಶುರಾಮನ ಕಾಲಬುಡದಲ್ಲಿ ಭೂತಗಳನ್ನಿಟ್ಟು ಭೂತಗಳಿಗೆ ಅವಮಾನ ಮಾಡಲಾಗಿದೆ. ಈ ಮೂಲಕ ಕೋಮುವಾದಿಗಳು ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ದಾರೆ’ ಎಂದು ಪ್ರೊ.ಬಿಳಿಮಲೆ ಆರೋಪಿಸಿದರು.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News