×
Ad

ಮಂಗಳೂರಿನಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ದ.ಕ. ಡಿಸಿ ದರ್ಶನ್ ಎಚ್.ವಿ

Update: 2026-02-05 19:19 IST

ಮಂಗಳೂರು: ಮಂಗಳೂರು ನಗರದಲ್ಲಿ ಹೆಲಿಕಾಪ್ಟರ್‌ಗಳಿಗೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಆವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಾಗ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಆನೇಕ ಆಸ್ಪತ್ರೆಗಳು ಇರುವ ಕಾರಣದಿಂದಾಗಿ ಮೆಡಿಕಲ್ ತುರ್ತು ಆವಶ್ಯಕತೆಗಳಿಗೆ , ವಿಐಪಿ ಗಳಿಗೆ, ಹೆಲಿಟ್ಯೂರಿಸಮ್‌ಗೆ ಹೆಲಿಪ್ಯಾಡ್ ಅಗತ್ಯ. ನಗರದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಇಲ್ಲದ ಕಾರಣದಿಂದಾಗಿ ವಿಐಪಿಗಳು ಆಗಮಿಸುವಾಗ ಪ್ರತಿಬಾರಿಯೂ ಸಮಸ್ಯೆ ಎದುರಾಗುತ್ತಿದೆ. ಹೆಲಿಟೂರಿಸಮ್‌ಗೂ ಶಾಶ್ವತ ಹೆಲಿಪಾಡ್ ಹೆಚ್ಚು ಅನುಕೂಲವಾಗುತ್ತದೆ ಎಂದು ನುಡಿದರು.

*ಪಿಲಿಕುಳ ಮೃಗಾಲಯ ಬಂದ್ ಆದೇಶ ಬಂದಿಲ್ಲ: ಪಿಲಿಕುಳ ಮೃಗಾಲಯ ಬಂದ್ ಮಾಡಬೇಕೆಂದು ಹೈಕೋರ್ಟ್ ಆದೇಶ ಕೊಟ್ಟಿರುವುದು ತಮಗೆ ಗೊತ್ತಿಲ್ಲ. ಅಂತಹ ಯಾವುದೇ ಆದೇಶ ತಮಗೆ ಬಂದಿಲ್ಲ . ಪಿಲಿಕುಳದಲ್ಲಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಡುವ ಪ್ರಸ್ತಾವನೆ ಇದೆ. ಅರಣ್ಯ ಇಲಾಖೆ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಅವರಿಗೆ ಹಸ್ತಾಂತರಿಸುವ ಮೊದಲು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಮುಂದಿನ ವಿಚಾರದಲ್ಲಿ ಈ ಬಗ್ಗೆ ಡಿಎಫ್‌ಒ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

*ಟ್ರೇಡ್ ಲೈಸನ್ಸ್ ನಿರಾಕರಣೆ ಇಲ್ಲ: ಕನ್ನಡ ಕಡ್ಡಾಯ ಎಂದು ಹೇಳಿದರೆ ಇನ್ನೊಂದು ಭಾಷೆಯನ್ನು ಬಳಸಬಾರದು ಎಂದರ್ಥವಲ್ಲ. ಕನ್ನಡ ಭಾಷೆಯನ್ನು ಹೆಚ್ಚು ಬಳಸಲು ಉತ್ತೇಜನ ನೀಡುವುದು ಸರಕಾರದ ಉದ್ದೇಶವಾಗಿದೆ. ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದಿದ್ದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂಬ ಆದೇಶವನ್ನು ತಾನು ನೀಡಿಲ್ಲ. ಆ ರೀತಿ ಆದೇಶ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಕರ್ನಾಟಕದಲ್ಲಿ ನಾಮಫಲಕಗಳು ಆಡಳಿತ ಭಾಷೆ ಕನ್ನಡದಲ್ಲಿ ಇರಬೇಕು. ಕನ್ನಡದೊಂದಿಗೆ ಸ್ಥಳೀಯ ಇತರ ಭಾಷೆಗಳನ್ನು ಬಳಸಬಾರದು ಎಂದೇನು ಇಲ್ಲ ಎಂದು ನುಡಿದರು.

*ನಂತೂರ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಖಚಿತ: ರಾಷ್ಟ್ರೀಯ ಹೆದ್ದಾರಿಯ ನಂತೂರಿನಲ್ಲಿ ಫ್ಲೈವರ್ ನಿರ್ಮಿಸುವ ಪ್ರಸ್ತಾವನೆಗ ಸಂಬಂಧಿ ಸಮಗ್ರ ಯೋಜನಾ ವರದಿ ( ಡಿಪಿಆರ್) ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡಿಪಿಆರ್ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಬೈಕಂಪಾಡಿ-ಕೆಐಒಸಿಎಲ್ ಮತ್ತು ನಂತೂರು- ಕೆಪಿಟಿ ಎರಡೂ ಕಡೆ ಫ್ಲೈಓವರ್ ನಿರ್ಮಾಣವಾಗುವುದು ಖಚಿತ . ಕೆಪಿಟಿಯಲ್ಲಿ ಫ್ಲೈ ಓವರ್ ರದ್ದಾಗಿದೆ ಎಂಬ ಮಾಹಿತಿ ಸರಿಯಲ್ಲಎಂದು ಸ್ಪಷ್ಟಪಡಿಸಿದರು.

* ಮಂಗಳೂರು ಪ್ರೆಸ್ ಕ್ಲಬ್‌ಗೆ ಮೊದಲ ಬಾರಿ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪತ್ರಿಕಾ ಭವನದಲ್ಲಿನ ವ್ಯವಸ್ಥೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಕೆಯುಡಬ್ಲ್ಯುಜೆ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್.‌ ಸ್ವಾಗತಿಸಿದರು. ಉಪಾಧ್ಯಕ್ಷ ಮುಹಮ್ಮದ್‌ ಆರಿಫ್‌ ವಂದಿಸಿದರು.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News