ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ದೈಹಿಕವಾಗಿ ಸದೃಢರಾಗಬೇಕಾಗಿದೆ : ಸೈಯದ್ ಕಿರ್ಮಾನಿ
ಮಂಗಳೂರು : ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ದೈಹಿಕವಾಗಿ ನಾವು ಸದೃಢರಾಗಿರಬೇಕಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸೋಮವಾರ ಸಂತ ಆಲೋಶೀಯಸ್ ಗೊನ್ಝಾಗ ಶಾಲೆಯ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ವ್ಯಾಯಾಮ ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾನಸಿಕವಾಗಿಯೂ ಸದೃಢರಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೇರೆಯವರ ಸಾಧನೆಯನ್ನು ಪ್ರೋತ್ಸಾಹಿಸುವ, ಅಭಿನಂದಿಸುವ ಪರಿಶುದ್ಧ ಮನಸ್ಸು ನಮ್ಮಲ್ಲಿರಬೇಕು. ನಾನು ಯಾರು, ನಾನು ಏನು ಮತ್ತು ನಾನು ಯಾವ ದಿಕ್ಕಿಗೆ ಸಾಗುತ್ತಿದ್ದೇನೆ ಎನ್ನುವುದನ್ನು ಚೆನ್ನಾಗಿ ಅರಿತುಕೊಂಡಾಗ ಜೀವನದಲ್ಲಿ ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು .
ಜೀವನದಲ್ಲಿ ದೃಢ ನಿರ್ಧಾರ, ಸಮರ್ಪಣಾ ಭಾವ, ಶಿಸ್ತು ಮತ್ತು ಸಮಯ ಪಾಲನೆ ಅತೀ ಅಗತ್ಯ. ಸಣ್ಣ ಪ್ರಾಯದಲ್ಲೇ ದೊಡ್ಡ ಗುರಿಯನ್ನು ಹೊಂದುವ ಮೂಲಕ ರಾಜ್ಯ ದೇಶಕ್ಕೆ ಹೆಸರು ತರುವ ಕೆಲಸ ಮಾಡಬೇಕು. ಹೆತ್ತವರು ನಿಮ್ಮಿಂದ ಉತ್ತಮವಾದುದನ್ನು ನಿರೀಕ್ಷಿಸುತ್ತಾರೆ ಅವರು ನಿಮಗಾಗಿ ಮಾಡಿರುವ ತ್ಯಾಗವನ್ನು ಯಾವತ್ತೂ ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಅವರು ಮಾತನಾಡಿ, ಕಿರ್ಮಾನಿ ಅವರು ನಮ್ಮ ಕಾಲದ ಹೆಸರಾಂತ ಕ್ರಿಕೆಟ್ ಆಟಗಾರ. ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಲಾರೆಲ್ ಡಿ ಸೋಜ , ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರೀನಾ ನೊರೊನ್ಹ, ದೈಹಿಕ ಶಿಕ್ಷಣ ಶಿಕ್ಷಕಿ ಆ್ಯಗ್ನೆಸ್ ಸಲ್ದಾನಾ, ಅಪರ್ಣಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ರೆ.ಫಾ.ರೋಹನ್ ಡಿ ಅಲ್ಮೇಡ ಸ್ವಾಗತಿಸಿದರು. ಧೀರಜ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.