×
Ad

ಉಳ್ಳಾಲ: ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು

Update: 2024-11-17 12:28 IST

ಉಳ್ಳಾಲ: ಖಾಸಗಿ ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಮೈಸೂರು ವಿಜಯ ನಗರದ ದೇವರಾಜ್ ಮೊಹಲ್ಲಾ ನಿವಾಸಿ ನವೀನ್ ಕುಮಾರ್ ಎಂಬವರ ಪುತ್ರಿ ಕೀರ್ತನಾ ಎನ್.(21), ಮೈಸೂರು ಕುರುಬರ ಹಳ್ಳಿ4 ನೇ ಕ್ರಾಸ್ ನಿವಾಸಿ ಮಲ್ಲೇಶ್ ಎಂಬವರ ಪುತ್ರಿ ನಿಶಿತಾ ಎಂ.ಡಿ.(21) ಹಾಗೂ ಮೈಸೂರು ಕೆ.ಆರ್.ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್.ಶ್ರೀನಿವಾಸ್ ಎಂಬವರ ಪುತ್ರಿ ಪಾರ್ವತಿ ಎಸ್.(20) ಎಂದು ಗುರುತಿಸಲಾಗಿದೆ.

 ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ.

ಶನಿವಾರ ಬೆಳಗ್ಗೆ ರೆಸಾರ್ಟ್ ಗೆ ಆಗಮಿಸಿದ್ದ ಈ ಮೂವರು ಯುವತಿಯರು ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿರುವ ಈಜುಕೊಳದಲ್ಲಿ ನೀರಾಟವಾಡುತ್ತಿದ್ದರು. ಈ ವೇಳೆ ಮೊಬೈಲ್ ಫೋನ್ ವೊಂದನ್ನು ಈಜುಕೊಳದ ನೀರಿಗೆ ಗುರಿಯಾಗಿಸಿ ವೀಡಿಯೊ ರೆಕಾರ್ಡ್ ಚಾಲನೆಯಲ್ಲಿಟ್ಟು ಈಜುಕೊಳಕ್ಕೆ ಇಳಿದಿದ್ದಾರೆ. ಸರಿಯಾಗಿ ಈಜು ಬಾರದ ಯುವತಿಯರು ಆಳವಿರುವ ಕಡೆ ತೆರಳಿದ್ದರಿಂದ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಉಳ್ಳಾಲ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News