×
Ad

ವಿಟ್ಲ: 18 ದಿನಗಳ ಹಿಂದೆ ದಫನ ಮಾಡಿದ್ದ ಮೃತದೇಹ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ನಿರ್ಧಾರ

18 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೋರ್ವರ ಸಹಜ ಸಾವಿನ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ದಫನ ಮಾಡಿರುವ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಪೊಲೀಸರು ಮುಂದಾಗಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ನಡೆದಿದೆ.

Update: 2024-05-23 12:26 IST

ವಿಟ್ಲ, ಮೇ 23: ಹದಿನೆಂಟು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೋರ್ವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತರ ಕುಟುಂಬಸ್ಥರು  ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ದಫನ ಮಾಡಿರುವ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಮಂಜೇಶ್ವರ ಹಾಗೂ ವಿಟ್ಲ ಠಾಣಾ ಪೊಲೀಸರು ಮುಂದಾಗಿದ್ದಾರೆ.

ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್(44) ಮೃತಪಟ್ಟವರು. ಇವರದ್ದು ಸಹಜ ಸಾವಲ್ಲ, ಇದರಲ್ಲಿ ನಿಗೂಢತೆ ಇರುವುದಾಗಿ ಸಂಶಯ ವ್ಯಕ್ತಪಡಿಸಿ ಮೃತರ ಸಹೋದರ ಇಬ್ರಾಹೀಂ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ರಫ್ ಅವರ ಮೃತದೇಹವನ್ನು ದಫನ ಮಾಡಿದಲ್ಲಿಂದ ಮೇಲೆತ್ತಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

 ಈ ಬಗ್ಗೆ ನ್ಯಾಯಾಲಯದ ಆದೇಶ ಪಡೆದು ಮಂಜೇಶ್ವರ ಪೊಲೀಸರು, ವಿಟ್ಲ ಠಾಣಾ ಪೊಲೀಸರ ಸಹಕಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಗುರುವಾರ ಬೆಳಗ್ಗೆ ಅಶ್ರಫ್ ರನ್ನು ದಫನ ಮಾಡಿರುವ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಗೆ ಆಗಮಿಸಿದ್ದಾರೆ. ಮಂಗಳೂರಿನ ಯೆನೆಪೊಯ ಆಸ್ಫತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿ, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವಿನಲ್ಲಿ ಅಶ್ರಫ್ ರ ಮೃತದೇಹವನ್ನು ದಫನ ಮಾಡಿದಲ್ಲಿಂದ ಮೇಲೆತ್ತುವ ಕಾರ್ಯ ಆರಂಭಿಸಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಘಟನೆ ವಿವರ: ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿಯಾಗಿದ್ದ ಅಶ್ರಫ್ ತಮ್ಮ ವಾಸದ ಮನೆ ಸಮೀಪ ಗೂಡಂಗಡಿ ನಡೆಸುತ್ತಿದ್ದರು. ಮೇ 5ರಂದು ರಾತ್ರಿ ಗೂಡಂಗಡಿ ಮುಚ್ಚಿ ಮನೆಯಲ್ಲಿ ಆಹಾರ ಸೇವಿಸಿ ನಿದ್ರಿಸಿದ್ದ ಅಶ್ರಫ್ ಮರುದಿನ ಬೆಳಗ್ಗೆ ಎದ್ದೇಳಲೇ ಇಲ್ಲ ಎನ್ನಲಾಗಿದೆ. ಮಲಗಿದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಶ್ರಫ್ ರ ಪತ್ನಿ ಇತರರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಬಳಿಕ ಅಂದು ಸಂಜೆ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಯ ದಫನಭೂಮಿಯಲ್ಲಿ ಅಶ್ರಫ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.

ಅಶ್ರಫ್ ಮೃತಪಟ್ಟ ಸಂದರ್ಭ ಅವರ ಸಹೋದರ ಇಬ್ರಾಹೀಂ ಪುಣೆಯಲ್ಲಿದ್ದರೆನ್ನಲಾಗಿದೆ. ಇದೀಗ ಅವರು ಊರಿಗೆ ಆಗಮಿಸಿ ತನ್ನ ಅಣ್ಣ ಅಶ್ರಫ್ ಸಾವಿನಲ್ಲಿ ನಿಗೂಢತೆ ಇರುವುದಾಗಿ ಸಂಶಯಿಸಿ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ttps://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News