ಮಂಗಳೂರು: ದುಷ್ಕರ್ಮಿಗಳಿಂದ ಇಬ್ಬರ ಮೇಲೆ ತಲವಾರು ದಾಳಿ; ಓರ್ವ ಮೃತ್ಯು
ಮೃತಪಟ್ಟ ಯುವಕ
ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಇಬ್ಬರ ಮೇಲೆ ತಲವಾರು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಅಡ್ಡೂರು ಕೊಲ್ತಮಜಲು ಎಂಬಲ್ಲಿ ಮಂಗಳವಾರ ವರದಿಯಾಗಿದೆ.
ಘಟನೆಯಲ್ಲಿ ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಅಬ್ದುಲ್ ರಹಿಮಾನ್ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕ ಕಲಂದರ್ ಶಾಫಿ ಗಾಯಗೊಂಡಿದ್ದಾರೆ.
ಅಬ್ದುಲ್ ರಹಿಮಾನ್ ಅವರು ಇಮ್ತಿಯಾಝ್ ಅವರೊಂದಿಗೆ ತನ್ನ ಪಿಕ್‌ಅಪ್ ವಾಹನದಲ್ಲಿ ಅಡ್ಡೂರಿನಿಂದ ಕಲ್ಪನೆ ಸಮೀಪದ ಕಾಗುಡ್ಡೆ ಎಂಬಲ್ಲಿ ಮನೆಯಯೊಂದರ ಬಳಿ ಮರಳು ಅನ್ ಲೋಡ್ ಮಾಡುತ್ತಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ರಹಿಮಾನ್ ಅವರ ತಲೆಗೆ ಗುರಿಯಾಗಿಸಿ ದಾಳಿ ಮಾಡಿದ್ದು, ಸುಮಾರು 5-8 ಬಾರಿ ತಲವಾರಿನಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅವರ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಈ ವೇಳೆ ರಹಿಮಾನ್ ಅವರ ಜೊತೆಗಿದ್ದ ಕಲಂದರ್ ಶಾಫಿ ಅವರ ಮೇಲೂ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದು, ಅವರ ಎರಡೂ ಕೈಗಳು, ಬುಜಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಅಬ್ದುಲ್ ರಹಿಮಾನ್ ಅವರ ಮೃತದೇಹವನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಾಳು ಕಲಂದರ್ ಶಾಫಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮೃತ ರಹಿಮಾನ್ ಅವರು ಕೊಲ್ತಮಜಲು ಜುಮಾ ಮಸೀದಿಯ ಕಾರ್ಯದರ್ಶಿಯಾಗಿದ್ದು, ಎಸ್ಕೆಎಸ್ಸೆಸ್ಸೆಫ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಯತೀಶ್ ಎನ್. ಡಿವೈಎಸ್ಪಿ ವಿಜಯ ಪ್ರಕಾಶ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಅಬ್ದುಲ್ ರಹಿಮಾನ್ ಕೊಲೆಗೆ ಕಾರಣವನೆಂದು ಗೊತ್ತಿಲ್ಲ. ಆತ ಮನೆಯಿಂದ ಬೆಳಗ್ಗೆ 7 ಗಂಟೆಗೆ ಹೋಗಿದ್ದ. ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡ್ ಸರ್ಕಲ್‌ನಲ್ಲಿ ಸಿಕ್ಕಿದ್ದನು. 3 ಗಂಟೆಗೆ ಮನೆಯ ಹತ್ತಿರದ ಶಶಿಕಿರಣ್ ಎಂಬವರು ಪೋನ್ ಮಾಡಿ ಗಲಾಟೆ ಆಗಿರುವ ವಿಚಾರ ತಿಳಿಸಿದರು. ಬಂದು ನೋಡಿದಾಗ ಸಹೋದರ ಕೊಲೆಯಾಗಿದ್ದನು. ಅವನು ಯಾರೊಂದಿಗೆ ಜಗಳ ಮಾಡಿದವನಲ್ಲ. ಸಜ್ಜನ ವ್ಯಕ್ತಿ.
ಮುಹಮ್ಮದ್ ಹನೀಫ್, ಮೃತ ಅಬ್ದುಲ್ ರಹಿಮಾನ್ ಸಹೋದರ
ನನ್ನ ಕಣ್ಣ ಮುಂದೆಯೇ ಬೆಳೆದ ಹುಡುಗ. ಯಾವುದೇ ಗಲಾಟೆಗೆ ಹೋದವನಲ್ಲ. 4 ವರ್ಷಗಳಿಂದ ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
-ಇಸ್ಮಾಯೀಲ್, ಕೊಳತ್ತಮಜಲು ಜುಮಾ ಮಸೀದಿ ಅಧ್ಯಕ್ಷರು