ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಸರಿಯಲ್ಲ : ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಶಾಸಕ ಹರೀಶ್ ಆಕ್ರೋಶ
ದಾವಣಗೆರೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೋದ ಬಂದಲ್ಲಿ 2028ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಜಿಎಂಐಟಿಯಲ್ಲಿ ಸಭೆ ಮಾಡಿಲ್ಲ. ನಿಷ್ಠಾವಂತ ಕಾರ್ಯಕರ್ತರು ತಮ್ಮ ನೋವು ಹೇಳಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಮಾಜಿ ಸಂಸದರು ನನ್ನ ಜೊತೆ ನೋವು ಹಂಚಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ್ದು, ಕಾರ್ಯಕರ್ತರಿಗೆ ಸಮಾಧಾನ ಮಾಡುತ್ತೇವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಬಂದಿದೆ. ಇಂತಹ ಹೊತ್ತಿನಲ್ಲಿ ಈ ಬೆಳವಣಿಗೆ ನಡೆಯಬಾರದಿತ್ತು ಎಂದು ಹೇಳಿದರು.
ಹೊನ್ನಾಳಿಯಲ್ಲಿ ನಡೆದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜನ್ಮ ದಿನಾಚರಣೆಯಂದು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎರಡೂವರೆ ವರ್ಷ ಇರುವಾಗಲೇ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳೆಂದು ಘೋಷಿಸುವುದು ಔಚಿತ್ಯವಾದರೂ ಏನಿತ್ತು ಎಂಬುದು ಮುಖಂಡರು ಮತ್ತು ಕಾರ್ಯಕರ್ತರ ಪ್ರಶ್ನೆ. ಮತ್ತೆ ಕೆಜೆಪಿ ಪಕ್ಷ ಕಟ್ಟಿದಂತೆ ಕಟ್ಟಲು ಯಡಿಯೂರಪ್ಪ ಮತ್ತು ಅವರ ಪುತ್ರ ಹೊರಟಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ, ಬಿಜೆಪಿ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿಗೆ ಬಂದು ಆಕ್ರೋಶ ಹೊರ ಹಾಕಿದ್ದಾರೆ. ನಾವು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಪರ ನಿಲ್ಲುತ್ತೇವೆ ಎಂದು ಹರೀಶ್ ಹೇಳಿದರು.
ಯಡಿಯೂರಪ್ಪ ಮತ್ತು ವಿಜಯೇಂದ್ರರ ಮನಸ್ಸಿನಲ್ಲಿ ಪ್ರಾದೇಶಿಕ ಪಕ್ಷ ಮಾಡಬೇಕೆಂಬುವುದು ಅವರ ಮಾತಿನ ನಡವಳಿಕೆಯಿಂದ ತಿಳಿದು ಬರುತ್ತದೆ. ಕೆಲವರಿಗೆ ಟಿಕೆಟ್ ಘೋಷಣೆ ಮಾಡಿ ಗೆಲ್ಲಿಸಿ ಎಂದು ಹೇಳಿದ್ದೂ ಅಲ್ಲದೆ ಸಚಿವ ಸಂಪುಟವನ್ನೂ ರೆಡಿ ಮಾಡಿ ಬಿಟ್ಟಿದ್ದಾರೆ. ಹೊನ್ನಾಳಿಯಲ್ಲಿ ಇರುವವನನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬುದನ್ನು ಈಗಾಗಲೇ ಹೇಳಿ ಬಿಟ್ಟಿದ್ದಾರೆ ಎಂದು ಹರೀಶ್ ವ್ಯಂಗ್ಯವಾಡಿದರು.