ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ: AIMIM ಆರೋಪ
ದಾವಣಗೆರೆ: ಕರ್ನಾಟಕ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ನಿರಾಶಾದಾಯಕವಾಗಿದ್ದು, ಇದು ಅಲ್ಪಸಂಖ್ಯಾತರ ಮೇಲಿನ ಅನ್ಯಾಯವಾಗಿದೆ ಎಂದು AIMIM ಪಕ್ಷ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ AIMIM ದಾವಣಗೆರೆ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೋಯಬ್ ಅವರು, ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 7,900 ಕೋಟಿ ರೂ. ಅನುದಾನ ನೀಡಬೇಕೆಂಬ ಬೇಡಿಕೆ ಇದ್ದರೂ ಸರ್ಕಾರ ಕೇವಲ 4,013.78 ಕೋಟಿ ರೂ. ಮಾತ್ರ ಮೀಸಲಿಟ್ಟಿದೆ. ಇದರಿಂದ ಸುಮಾರು 3,900 ಕೋಟಿ ರೂ ಕೊರತೆ ಉಂಟಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 8 ಕೋಟಿ ರೂ. ನಿಂದ ಶೂನ್ಯಕ್ಕೆ ಇಳಿಸಲಾಗಿದೆ. ಹಾಗೆಯೇ ಸ್ಕಾಲರ್‌ಶಿಪ್ ಹಾಗೂ ಶುಲ್ಕ ಮರುಪಾವತಿ ಯೋಜನೆಗೆ ನೀಡುತ್ತಿದ್ದ 338 ಕೋಟಿ ರೂ. ಅನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಕಾನೂನು ಪದವೀಧರರಿಗೆ ನೀಡುತ್ತಿದ್ದ 2.36 ಕೋಟಿ ರೂ. ಸ್ಟೈಪೆಂಡ್ ಕೂಡ ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.
ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳ ಅಭಿವೃದ್ಧಿಗೂ ಕಡಿತ ಅನುದಾನ ಮಾಡಲಾಗಿದೆ. ಕಾಲೋನಿ ಅಭಿವೃದ್ಧಿ ಯೋಜನೆಗೆ ನೀಡುತ್ತಿದ್ದ 400 ಕೋಟಿ ರೂ. ಅನ್ನು 325 ಕೋಟಿ ರೂ.ಗೆ ಇಳಿಸಲಾಗಿದ್ದು, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ವಿಶೇಷ ಅಭಿವೃದ್ಧಿ ಯೋಜನೆಗೆ ನೀಡುತ್ತಿದ್ದ 724 ಕೋಟಿ ರೂ. ಅನ್ನು ಕೂಡ 325 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ “ಮೌಲಾನಾ ಅಬುಲ್ ಕಲಾಂ ಆಝಾದ್ ಶಾಲೆ ಮತ್ತು ಗರ್ಲ್ಸ್ ಕಾಲೇಜು” ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಇದುವರೆಗೆ ಅದರ ಅನುಷ್ಠಾನದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಬಲೀಕರಣಕ್ಕೆ ಸಂಬಂಧಿಸಿದ ಯಾವುದೇ ವಿಶೇಷ ಯೋಜನೆ ಕಾಣಿಸದಿರುವುದು ಮತ್ತೊಂದು ಆತಂಕಕಾರಿ ವಿಷಯವಾಗಿದೆ ಎಂದರು.
ಇನ್ನೊಂದೆಡೆ ಆಡಳಿತಾತ್ಮಕ ಮತ್ತು ಬ್ಯೂರೋಕ್ರಸಿ ವೆಚ್ಚಗಳನ್ನು ಹೆಚ್ಚಿಸಿರುವ ಸರ್ಕಾರ, ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿರುವುದು ನಿಧಿ ಹಂಚಿಕೆ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತ ಆಯೋಗಕ್ಕೆ ಕೇವಲ 3.91 ಲಕ್ಷ ರೂ. ಹೆಚ್ಚಳ ನೀಡಿರುವುದು ಅರ್ಥಹೀನವಾಗಿದ್ದು, ಆಯೋಗವನ್ನು ಬಲಪಡಿಸಲು ಕನಿಷ್ಠ 20 ಕೋಟಿ ರೂ. ಅನುದಾನ ನೀಡಬೇಕಿತ್ತು ಎಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ “ಮುಸ್ಲಿಂ” ಎಂಬ ಪದವನ್ನೇ ಉಲ್ಲೇಖಿಸದಿರುವುದು ಮತ್ತು ಬಜೆಟ್ ದಾಖಲೆಗಳಲ್ಲಿ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಚಿತ್ರ ಕಾಣಿಸದಿರುವುದು ಕೂಡ ಆತಂಕಕಾರಿ ಸಂಗತಿಗಳಾಗಿವೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕನಿಷ್ಠ 7,900 ಕೋಟಿ ರೂ. ಅನುದಾನ ನೀಡಬೇಕು, ಸ್ಕಾಲರ್‌ಶಿಪ್ ಹಾಗೂ ಶುಲ್ಕ ಮರುಪಾವತಿ ಯೋಜನೆಗಳನ್ನು ತಕ್ಷಣ ಪುನಃ ಜಾರಿಗೆ ತರಬೇಕು, ಮೌಲಾನಾ ಅಬುಲ್ ಕಲಾಂ ಆಝಾದ್ ಶಾಲೆ ಮತ್ತು ಗರ್ಲ್ಸ್ ಕಾಲೇಜು ಯೋಜನೆಯನ್ನು ಅನುಷ್ಠಾನಗೊಳಿಸಬೇಕು, ಅಲ್ಪಸಂಖ್ಯಾತ ಆಯೋಗಕ್ಕೆ ಕನಿಷ್ಠ ₹20 ಕೋಟಿ ಅನುದಾನ ನೀಡಬೇಕು ಹಾಗೂ ಯುವಕರಿಗೆ ವಿಶೇಷ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಬಲೀಕರಣ ಯೋಜನೆಗಳನ್ನು ಘೋಷಿಸಬೇಕು ಎಂದು AIMIM ಒತ್ತಾಯಿಸಿದೆ.