Davanagere | ಬೆಸ್ಕಾಂ ಎಇಇ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ದಾವಣಗೆರೆ : ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್.ಅರ್ಜುನ್ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ದಾವಣಗೆರೆ ಮತ್ತು ಶಿವಮೊಗ್ಗದ ಲೋಕಾಯುಕ್ತ ಪೊಲೀಸರ ಜಂಟಿ ತಂಡವು ಈ ಕಾರ್ಯಾಚರಣೆ ನಡೆಸಿದೆ. ಎಂಜಿನಿಯರ್ ಅರ್ಜುನ್ ಅವರಿಗೆ ಸಂಬಂಧಿಸಿದ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಯಿತು.
ದಾವಣಗೆರೆಯ ಬೆಸ್ಕಾಂ ಕಚೇರಿ ಹಾಗೂ ನಿಟುವಳ್ಳಿ ಬಡಾವಣೆಯಲ್ಲಿರುವ ವಾಸದ ಮನೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ವಾಣಿಜ್ಯ ಸಂಕೀರ್ಣ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ತಳಲೆ ಗ್ರಾಮದ ಬಳಿ ಇರುವ ತೋಟದ ಮನೆಗಳ ಮೇಲೆ ದಾಳಿ ನಡೆದಿದೆ.
ಅರ್ಜುನ್ ಅವರು ತಮ್ಮ ಅಧಿಕೃತ ಆದಾಯದ ಮೂಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದಾರೆ ಎಂಬ ಖಚಿತ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿಯ ವೇಳೆ ಆಸ್ತಿ , ಬ್ಯಾಂಕ್ ಖಾತೆಗಳು ಹಾಗೂ ಚಿನ್ನಾಭರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
"ಅರ್ಜುನ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ದೂರು ಬಂದಿತ್ತು. ಮನೆ, ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೇವೆ" ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ತಿಳಿಸಿದ್ದಾರೆ.