ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಣೆ; ಯಡಿಯೂರಪ್ಪರಿಂದ ಶಿಷ್ಟಾಚಾರ ಉಲ್ಲಂಘನೆ : ಶಾಂತರಾಜು ಪಾಟೀಲ್
ಬಿ.ಎಸ್.ಯಡಿಯೂರಪ್ಪ
ದಾವಣಗೆರೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಿಸಿರುವುದನ್ನು ಬಿಜೆಪಿ ಮುಖಂಡ ಶಾಂತರಾಜು ಪಾಟೀಲ್ ಖಂಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವುದು ಪಕ್ಷದ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ ನಾಯಕರಿಂದ ಮಾ.5ರಂದು ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಸಭೆ ಕರೆಯಲಾಗಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರ ಸಂಸದೀಯ ಮಂಡಳಿ ಮಾಡಬೇಕೇ ಹೊರತು ವೈಯಕ್ತಿಕವಾಗಿ ಘೋಷಿಸುವುದಲ್ಲ. ಯಡಿಯೂರಪ್ಪ ಅವರ ಈ ನಡೆ ಕಾರ್ಯಕರ್ತರ ಉತ್ಸಾಹ ಕುಗ್ಗಿಸುವಂತಿದೆ. ಅವರ ನಡೆ ನೋಡಿದರೆ ಬಿಜೆಪಿಯಿಂದ ಹೊರನಡೆದು ಪ್ರಾದೇಶಿಕ ಪಕ್ಷವೊಂದನ್ನು ಸಂಘಟಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ ಎಂದರು.
ಬಿ.ವೈ. ವಿಜಯೇಂದ್ರ ಅವರು ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಜಿಲ್ಲೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಇತ್ತೀಚೆಗೆ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಕ್ಷದ ಶಾಸಕ ಬಿ.ಪಿ. ಹರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಆಹ್ವಾನ ನೀಡದಿರುವುದು ಗುಂಪುಗಾರಿಕೆಗೆ ಸಾಕ್ಷಿಯಾಗಿದೆ.
ವಿಜಯೇಂದ್ರ ಅವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು. ಜಿಎಂಐಟಿ ಅತಿಥಿಗೃಹದಲ್ಲಿ ನಡೆಯಲಿರುವ ಸಭೆಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇಲ್ಲಿ ನಡೆಯುವ ಚರ್ಚೆಯ ಸಾರಾಂಶವನ್ನು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದು ಶಾಂತರಾಜು ತಿಳಿಸಿದ್ದಾರೆ.
ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ಎಚ್.ಎಸ್., ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿದರು.
ಹೊನ್ನಾಳಿಯಲ್ಲಿ ನಡೆದ ಮಾಜಿ ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ. ಹೊನ್ನಾಳಿಗೆ ಎಂಪಿ ರೇಣುಕಾಚಾರ್ಯ, ಚನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ , ಹರಿಹರ-ಚಂದ್ರಶೇಖರ ಪೂಜಾರ, ದಾವಣಗೆರೆ ಉತ್ತರ ಲೋಕಕೆರೆ ನಾಗರಾಜ್, ಜಗಳೂರು ಎಸ್ ವಿ ರಾಮಚಂದ್ರ ಹಾಗೂ ಹರಪನಹಳ್ಳಿ-ಕರುಣಾಕರ ರೆಡ್ಡಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಇತರೆ ನಾಯಕರ ಆಕ್ರೊಶಕ್ಕೆ ಕಾರಣವಾಗಿದೆ.