ಕನ್ನಡ ಭಾಷಾಭಿಮಾನ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗದೆ ನಿತ್ಯದ ಉಸಿರಾಗಲಿ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
71ನೇ ಕರ್ನಾಟಕ ರಾಜ್ಯೋತ್ಸವ
ದಾವಣಗೆರೆ : ಕನ್ನಡ ಭಾಷಾಭಿಮಾನವು ಕೇವಲ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬರ ನಿತ್ಯದ ಉಸಿರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕರೆ ನೀಡಿದರು.
ರವಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1956ರ ನವೆಂಬರ್ 1ರಂದು ಮುಂಬೈ, ಮದ್ರಾಸ್, ಹೈದರಾಬಾದ್ ಹಾಗೂ ಮೈಸೂರು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ನೆಲ ಒಂದಾದ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ ಅವರು, ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ ಸೇರಿದಂತೆ ಹಲವು ಮಹನೀಯರ ಕೊಡುಗೆಯನ್ನು ನೆನಪಿಸಿಕೊಂಡರು. ನಮ್ಮ ನಾಡಿಗೆ ಎರಡು ಸಾವಿರ ವರ್ಷಗಳ ಸಾಹಿತ್ಯಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯಿದೆ ಎಂದು ಕೊಂಡಾಡಿದರು.
‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಧ್ಯೇಯದೊಂದಿಗೆ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಲ ತುಂಬುತ್ತಿವೆ. ಪ್ರಸ್ತುತ ಬರಗಾಲದ ಸಂದರ್ಭದಲ್ಲಿಯೂ ರೈತರ ನೆರವಿಗೆ ರಾಜ್ಯ ಸರ್ಕಾರ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ದಾವಣಗೆರೆಯ ಹೆಸರಾಂತ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ಸಚಿವರು ಜಿಲ್ಲೆಯ ನಾಗರಿಕರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.
40 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ :
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಜಿಲ್ಲೆಯ 40 ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರು :
ಬಸವರಾಜ (ನ್ಯಾಮತಿ)-ರಂಗಭೂಮಿ, ಜಿ. ಮುರಿಗಪ್ಪಗೌಡ (ಹೊನ್ನಾಳಿ)-ಸಾಹಿತ್ಯ, ಬಿ.ಎಚ್. ಅಂಜಿನಪ್ಪ (ಬೆಂಚಿಘಟ್ಟ, ಜಗಳೂರು)-ಭಜನೆ, ಮಾನಾಚಾರಿ ಕೆ. (ಸೊರಟೂರು, ಹೊನ್ನಾಳಿ)-ಹಿಂದುಸ್ತಾನಿ ಸಂಗೀತ, ಕೋಟ್ರಪ್ಪ (ಹರಿಹರ)-ಡೋಳುಕುಣಿತ (ಜಾನಪದ), ರಮಾಬಾಯಿ ಕಮಲಾಕರ್ (ದಾವಣಗೆರೆ)-ಸಂಗೀತ, ಬಿ. ತಿರುಕಪ್ಪ (ದಾವಣಗೆರೆ)-ಕನ್ನಡಪರ ಹೋರಾಟ, ಪಿ. ಜಯರಾಮನ್ (ದಾವಣಗೆರೆ)-ಕ್ರೀಡೆ, ಬಾ.ರಾ. ಮಹೇಶ್ (ಚನ್ನಗಿರಿ)-ಪತ್ರಿಕೋದ್ಯಮ, ಎ.ಕೆ. ಓಬಪ್ಪ (ಜಗಳೂರು)-ಸಂಕೀರ್ಣ, ಕುಮಾರ್ (ದಾವಣಗೆರೆ)-ಛಾಯಾಗ್ರಹಣ, ಹೆಚ್.ಎನ್. ಶಿವಕುಮಾರಸ್ವಾಮಿ (ಚನ್ನಗಿರಿ)-ತಬಲ, ಬೆನಕನಹಳ್ಳಿ ಶೇಖರಗೌಡ (ಹೊನ್ನಾಳಿ)-ಮಾಧ್ಯಮ, ಗೀತಾ ಚಂದ್ರಶೇಖರ (ದಾವಣಗೆರೆ)-ಸಮಾಜ ಸೇವೆ, ಬಾಳಪ್ಪ ಹೆಚ್. (ದಾವಣಗೆರೆ)-ಜಾನಪದ, ಮಂಜುನಾಥ ಬಿ. (ದಾವಣಗೆರೆ)-ಛಾಯಾಗ್ರಹಣ, ಜಿ. ಮುದ್ದುವೀರಸ್ವಾಮಿ (ದಾವಣಗೆರೆ)-ಸಾಹಿತ್ಯ, ರವಿಕುಮಾರ್ ಕೆ.ಬಿ. (ಹರಿಹರ)-ವೀರಗಾಸೆ, ಶಹನವಾಜ್ ಯು.ಆರ್. (ದಾವಣಗೆರೆ)-ಸಮಾಜ ಸೇವೆ, ಜಿ. ಶಂಭುಲಿಂಗಪ್ಪ (ದಾವಣಗೆರೆ)-ಸಂಗೀತ, ಎಸ್.ಎಸ್. ಮಂಜುಶ್ರೀ (ಗೌಡ) (ದಾವಣಗೆರೆ)-ಕನ್ನಡಪರ ಸಂಘಟನೆ, ರಮೇಶ್ ಮಾನೆ (ಹರಿಹರ)-ಕನ್ನಡಪರ ಹೋರಾಟ, ಸತೀಶ್ ಎಂ.ವೈ. (ದಾವಣಗೆರೆ)-ಮಾಧ್ಯಮ, ಶಿವಮೂರ್ತಿ ಆರ್. (ಚನ್ನಗಿರಿ)-ಸಂಕೀರ್ಣ, ಎಂ.ಆರ್. ಮಾಲತೇಶ್ (ಹರಿಹರ)-ಜಾನಪದ, ಡಿ. ರಂಗನಾಥ್ (ಹರಿಹರ, ದಾವಣಗೆರೆ)-ಬೀದಿನಾಟಕ, ರಮೇಶ್ ಜಹಗೀರ್ದಾರ್ (ದಾವಣಗೆರೆ)-ಮಾಧ್ಯಮ, ಎಸ್.ಪಿ. ನಾರಾಯಣರಾವ್ (ಬಾಬುರಾವ್ ಸುತ್ರಾವ್)-ಕನ್ನಡಪರ ಹೋರಾಟ, ಎಸ್. ಕೋಟೇಶ್ (ದಾವಣಗೆರೆ)-ಜಾನಪದ, ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ (ದಾವಣಗೆರೆ)-ಪತ್ರಿಕೋದ್ಯಮ, ಶೇಖರಗೌಡ ಪಾಟೀಲ್ (ಹರಿಹರ)-ಪತ್ರಿಕೋದ್ಯಮ, ಎ.ಎನ್. ನಿಂಗಪ್ಪ (ದಾವಣಗೆರೆ)-ಮಾಧ್ಯಮ, ಟಿ. ಕರಿಬಸಪ್ಪ (ದಾವಣಗೆರೆ)-ಸಂಕೀರ್ಣ, ವೈ. ಮಲ್ಲೇಶ್ ಶಿಲ್ಪಿ (ದಾವಣಗೆರೆ)-ಶಿಲ್ಪಕಲೆ, ರಮೇಶ್ ಬಿ. (ಹೊನ್ನಾಳಿ)-ಸಮಾಜ ಸೇವೆ, ಸಲೀಂ ಜಾವೀದ್ (ದಾವಣಗೆರೆ)-ಮಾಧ್ಯಮ, ಗಣೇಶ್ಕುಮಾರ್ (ದಾವಣಗೆರೆ)-ಶಿಲ್ಪಕಲೆ, ಪುನೀತ್ ಅಪ್ಪಿ (ದಾವಣಗೆರೆ)-ಮಾಧ್ಯಮ, ಹನುಮಂತರಾವ್ ಬಿ. (ದಾವಣಗೆರೆ)-ಮಾಧ್ಯಮ ಹಾಗೂ ಶಿವ ಕೆ. ಬೆಳಗುತ್ತಿ (ನ್ಯಾಮತಿ)-ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದರು.
ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳು :
ಪಥಸಂಚಲನದಲ್ಲಿ ಡಿಎಆರ್ ಪೊಲೀಸ್ ತಂಡದ ನೇತೃತ್ವವನ್ನು ನಾಗರಾಜ್, ಆರ್ಎಸ್ಐ ವಹಿಸಿದ್ದರು. ನಗರ ಉಪವಿಭಾಗ ಪೊಲೀಸ್ ತಂಡವನ್ನು ವಿದ್ಯಾನಗರ ಠಾಣೆಯ ಪಿಎಸ್ಐ ಸಚಿನ್ ಬಿರಾದಾರ್, ಗೃಹರಕ್ಷಕ ದಳವನ್ನು ಪ್ಲಟೂನ್ ಕಮಾಂಡರ್ ಹೆಚ್.ಕೆ. ಹಾಲೇಶ್, ಅರಣ್ಯ ರಕ್ಷಕ ದಳವನ್ನು ಡಿಆರ್ಎಫ್ಒ ಚೇತನ್, ಜಿಲ್ಲಾ ಅಗ್ನಿಶಾಮಕ ದಳವನ್ನು ಫೈರ್ ಸ್ಟೇಷನ್ ಆಫೀಸರ್ ನಸೀಮ್ ಸಾಬ್ ಮುನ್ನಡೆಸಿದರು.
ಇದರೊಂದಿಗೆ ಎಲ್ಆರ್ ಕಾಲೇಜಿನ ಸುನೀಲ್ ಕುಮಾರ್, ಜಿಎಫ್ಜಿಸಿ ಕಾಲೇಜಿನ ದವೀದ್ ವೈ., ಡಿಆರ್ಆರ್ ಕಾಲೇಜಿನ ಕುಶಾಲ್ ಹೆಚ್., ಎವಿಕೆ ಕಾಲೇಜಿನ ಸುಕನ್ಯ ರಮೇಶ್, ಸೇಂಟ್ ಪೌಲ್ಸ್ ಕನ್ವೆಂಟ್ ಹೈಸ್ಕೂಲ್ನ ಭುವನಾ ಬೆಳ್ಳೂಡಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಬಾಲಕಿಯರ ತಂಡದ ಧನುಶ್ರೀ ಹಿರೇಮಠ, ಸಿದ್ಧಗಂಗಾ ಶಾಲೆಯ ದೀಕ್ಷಾ ಆರ್., ಜೈನ್ ಪಬ್ಲಿಕ್ ಶಾಲೆಯ ನಿಧಿ ಎಸ್. ಪಾಟೀಲ್ ಹಾಗೂ ಡಿಆರ್ ಪೊಲೀಸ್ ವಾದ್ಯವೃಂದದ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ನೇತೃತ್ವದಲ್ಲಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.
ಪಥಸಂಚಲನ ಪ್ರಶಸ್ತಿ ವಿಜೇತರು :
ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳ ತಂಡಗಳ ವಿಭಾಗದಲ್ಲಿ ಡಿಎಆರ್ ಪೊಲೀಸ್ ತಂಡ ಪ್ರಥಮ, ನಗರ ಉಪವಿಭಾಗ ಪೊಲೀಸ್ ತಂಡ ದ್ವಿತೀಯ ಹಾಗೂ ಅಗ್ನಿಶಾಮಕ ದಳ ತೃತೀಯ ಸ್ಥಾನ ಪಡೆದವು. ಎನ್ಸಿಸಿ ವಿಭಾಗದಲ್ಲಿ ಜಿಎಫ್ಜಿಸಿ ಕಾಲೇಜು ಪ್ರಥಮ, ಎಆರ್ಜಿ ದ್ವಿತೀಯ ಹಾಗೂ ಡಿಆರ್ಆರ್ ಕಾಲೇಜು ತೃತೀಯ ಸ್ಥಾನ ಗಳಿಸಿದವು.
ಶಾಲಾ ತಂಡಗಳ ವಿಭಾಗದಲ್ಲಿ ಸಿದ್ಧಗಂಗಾ ಶಾಲೆ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡ ತೃತೀಯ ಸ್ಥಾನ ಪಡೆದವು. ಉತ್ತಮ ಸಮವಸ್ತ್ರ ವಿಭಾಗದಲ್ಲಿ ಎವಿಕೆ ಕಾಲೇಜು ಎನ್ಸಿಸಿ ತಂಡ ಪ್ರಥಮ, ಸೇಂಟ್ ಪೌಲ್ಸ್ ಎನ್ಸಿಸಿ ತಂಡ ದ್ವಿತೀಯ ಹಾಗೂ ಸಿದ್ಧಗಂಗಾ ಶಾಲೆ ತೃತೀಯ ಸ್ಥಾನ ಗಳಿಸಿದವು.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರು :
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ದಾವಣಗೆರೆ ದಕ್ಷಿಣ ವಲಯದ ಜೈನ್ ವಿದ್ಯಾಲಯ ಶಾಲೆಯು ಇಮ್ಮಡಿ ಪುಲಕೇಶಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಕುರಿತ ವಿಷಯದೊಂದಿಗೆ ಪ್ರಥಮ ಸ್ಥಾನ ಗಳಿಸಿತು. ದಾವಣಗೆರೆ ದಕ್ಷಿಣ ವಲಯದ ರಾಷ್ಟ್ರೋತ್ಥಾನ ಪ್ರೌಢಶಾಲೆಯು ‘ಹಚ್ಚೇವು ಕನ್ನಡದ ದೀಪ’ ಕಾರ್ಯಕ್ರಮದೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ದಾವಣಗೆರೆ ಉತ್ತರ ವಲಯದ ನಿಟ್ಟುವಳ್ಳಿಯ ಗುರುಬಸಮ್ಮ ಜಿಗಟೇರಿ ಇಂಗ್ಲಿಷ್ ಮೀಡಿಯಂ ಶಾಲೆಯು ಕನ್ನಡ ಹಾಡುಗಳ ರೀಮಿಕ್ಸ್ ಪ್ರದರ್ಶನದೊಂದಿಗೆ ತೃತೀಯ ಸ್ಥಾನ ಗಳಿಸಿತು.
ವಂದೇ ಮಾತರಂ ಗೀತೆಯನ್ನು ಪುಷ್ಪ ಮಹಾಲಿಂಗಪ್ಪ ಪ್ರೌಢಶಾಲೆಯ ಮಹಾಲಿಂಗ ಮತ್ತು ತಂಡ ಪ್ರಸ್ತುತಪಡಿಸಿದರೆ, ನಾಡಗೀತೆಯನ್ನು ಶಿಕ್ಷಕರ ಜಿಲ್ಲಾ ತಂಡದ ಅಜಯ್ ನಾರಾಯಣ ತಂಡ ಹಾಡಿತು.
ಕಾರ್ಯಕ್ರಮದಲ್ಲಿ ಶಾಸಕ ಸಮರ್ಥ ಶಾಮನೂರು, ದುಡಾ ಅಧ್ಯಕ್ಷ ದಿನೇಶ್ ಶೆಟ್ಟಿ, ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಎನ್. ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಡಾ. ಎನ್. ಮಹಾಂತೇಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.