×
Ad

ಹುಬ್ಬಳ್ಳಿಯ ಇನ್ಫೋಸಿಸ್ ಜಾಗತಿಕವಾಗಿ ಗಮನ ಸೆಳೆಯಲಿ : ಎಂ.ಬಿ.ಪಾಟೀಲ್

Update: 2025-08-07 14:47 IST

ಹುಬ್ಬಳ್ಳಿ : ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯ ಸ್ಥಳೀಯ ಘಟಕವು ಈಗಿನ ಪ್ರಮಾಣಕ್ಕಿಂತ ಇನ್ನೂ ಹತ್ತು ಪಟ್ಟು ಬೆಳೆಯಬೇಕು. ಈ ಮೂಲಕ ಕಂಪೆನಿಯ ಹುಬ್ಬಳ್ಳಿ ಕೇಂದ್ರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹ ಪ್ರಧಾನ ತಾಣವಾಗಿ ಅಭಿವೃದ್ಧಿ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಆಶಿಸಿದ್ದಾರೆ.

ಬುಧವಾರ ಇಲ್ಲಿನ ಇನ್ಫೋಸಿಸ್ ಹುಬ್ಬಳ್ಳಿ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಇನ್ಫೋಸಿಸ್ ಕಂಪೆನಿಯು ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲೂ ನೆಲೆಯೂರಬೇಕು ಎಂದು ಹೇಳಿದರು.

ಸರಕಾರವು ಬೆಂಗಳೂರಿನಿಂದ ಹೊರಗಿರುವ 2ನೆ ಹಂತದ ನಗರಗಳಲ್ಲಿ ಕೂಡ ಔದ್ಯೋಗಿಕ ಕಾರ್ಯ ಪರಿಸರ ಸೃಷ್ಟಿಸುತ್ತಿದೆ. ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಸಂಸ್ಥೆಯು ಗಳಿಸಿರುವ ಯಶಸ್ಸು, ಸರಕಾರದ ಬಿಯಾಂಡ್ ಬೆಂಗಳೂರು ಉಪಕ್ರಮದ ಫಲವಾಗಿದೆ. ನಾವು ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿಯೂ ಇನ್ನೋವೇಶನ್ ಕಾರಿಡಾರ್ ಗಳನ್ನು ಅಭಿವೃದ್ಧಿ ಪಡಿಸಲು ಬದ್ಧರಾಗಿದ್ದೇವೆ ಎಂದು ಅವರು ನುಡಿದರು.

ಹುಬ್ಬಳ್ಳಿಯ ಇನ್ಫೋಸಿಸ್ ಘಟಕವು ಈಗ ಒಂದು ಸಾವಿರಕ್ಕೂ ಹೆಚ್ಚು ವೃತ್ತಿಪರರನ್ನು ಹೊಂದಿದೆ. ಇದಕ್ಕೆ ತಕ್ಕಂತೆ ಹುಬ್ಬಳ್ಳಿ-ಧಾರವಾಡ ಪ್ರದೇಶವು 43 ಇಂಜಿನಿಯರಿಂಗ್ ಕಾಲೇಜು ಮತ್ತು 127 ಪದವಿ ಕಾಲೇಜುಗಳೊಂದಿಗೆ 35 ಸಾವಿರ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವನ್ನು ಒದಗಿಸುತ್ತಿದೆ. 49 ಡಿಪ್ಲೊಮಾ ಕಾಲೇಜುಗಳು ಕೂಡ ಇಲ್ಲಿದ್ದು, 20 ಸಾವಿರ ಬಿಪಿಎಂ ವೃತ್ತಿಪರರು ಉದ್ಯೋಗಕ್ಕೆ ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಇನ್ಫೋಸಿಸ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನಿಲ್ ಕುಮಾರ್ ಧಾರೇಶ್ವರ್ ಮತ್ತು ರಜನೀಶ್ ಮಾಳವೀಯ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News