ನನ್ನ ವಿರುದ್ಧ ಆರೋಪಗಳಿದ್ದರೆ ಅವಿಶ್ವಾಸ ಮಂಡನೆ ಮಾಡಲಿ : ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
ಹುಬ್ಬಳ್ಳಿ : ಇಲ್ಲಿಯವರೆಗೆ ಏಕಾಏಕಿ ಸಭಾಪತಿಗಳ ಮೇಲೆ ಅವಿಶ್ವಾಸ ಮಂಡನೆ ಮಾಡಿದ ಘಟನೆಗಳು ನಡೆದಿಲ್ಲ. ಸಭಾಪತಿಗಳು ಏನಾದರೂ ಭ್ರಷ್ಟಾಚಾರ ಹಾಗೂ ಏಕಪಕ್ಷೀಯವಾಗಿ ವರ್ತನೆ ಮಾಡಿದ್ದರೆ, ಅವಿಶ್ವಾಸ ಮಂಡನೆ ಮಾಡಲಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ತಮ್ಮ ವಿರುದ್ಧ ಅವಿಶ್ವಾಸ ಮಂಡನೆಯ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ ಎನ್ನುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಅವಿಶ್ವಾಸ ಮಂಡನೆ ಮಾಡಲು ನನ್ನ ವಿರುದ್ಧ ಏನಾದರೂ ಬೇಕಲ್ಲವಾ ಎಂದು ಪ್ರಶ್ನಿಸಿದರು.
ನಾನು ಸಭಾಪತಿಯಾಗಿ ಇಲ್ಲಿಯವರೆಗೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗೆ ಇದೆ. ಪ್ರಜಾಪ್ರಭುತ್ವದಲ್ಲಿ ಅವರವರ ಅಧಿಕಾರದ ಬಗ್ಗೆ ನಾನು ಏನೂ ಹೇಳಲ್ಲ. ಇಲ್ಲಿವರೆಗೆ 24 ಸಭಾಪತಿಗಳಾಗಿದ್ದಾರೆ. ಆದರೆ, ಯಾರ ಮೇಲೂ ಅವಿಶ್ವಾಸ ಮಂಡನೆಯಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸಭಾಪತಿಯಾಗಿರಬೇಕು. ಆದರೆ, ಅವರು(ಕಾಂಗ್ರೆಸ್) ಮಾಡಲೇಬೇಕು ಎಂದರೆ ಮಾಡಲಿ. ಯಾಕೆ ಮಾಡಿದ್ದಾರೆ ಅಂತ ನಾನೂ ಕೇಳುತ್ತೇನೆ ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಆಗಲಿ ಅನ್ನುವ ಉದ್ದೇಶದಿಂದ ಬುಧವಾರ ಚರ್ಚೆಗೆ ಅವಕಾಶ ಕೊಡಲಾಗುತ್ತದೆ. ಅಂದು ಉತ್ತರ ಕರ್ನಾಟಕ ಸದಸ್ಯರ ಪ್ರಶ್ನೆಗೆ ಹೆಚ್ಚಿ ನ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಹೇಳಿದರು.
ಶಾಸಕರು ತಂಗಲು ಶಾಸಕರ ಭವನ ಕಟ್ಟಿಸುವ ಅವಶ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು. ಅನೇಕ ಶಾಸಕರು, ಸಚಿವರು ಇಂತಹದ್ದೇ ಹೊಟೇಲ್‌ನಲ್ಲಿ ಕೋಣೆ ಬೇಕು ಅಂತ ಪತ್ರ ಬರೆದಿದ್ದಾರೆ. ಅದನ್ನು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೊರಟ್ಟಿ ವಿವರಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಆಗಲಿ :
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಶಾಸಕರು ಆಸಕ್ತಿ ವಹಿಸಿ ಸದನದಲ್ಲಿ ಭಾಗಿಯಾಗಬೇಕು. ಅಧಿವೇಶನದ ಕಲಾಪದಲ್ಲಿ ಬರೀ ಪ್ರತಿಭಟನೆ ಮಾಡುವುದು, ಬಾವಿಗೆ ಇಳಿದು ಕೂರುವುದನ್ನು ಮಾಡಬೇಡಿ ಅಂತ ಎಲ್ಲ ಶಾಸಕರಿಗೆ ಹೇಳಿದ್ದು, ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಆಗಲಿ ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.