×
Ad

Hubballi | ಇಂಡಿಗೋ ವಿಮಾನ ರದ್ದು: ವಧು-ವರ ಇಲ್ಲದೆ ನಡೆದ ಆರತಕ್ಷತೆ ಕಾರ್ಯಕ್ರಮ

ಆನ್‌ಲೈನ್‌ನಲ್ಲೇ ಭಾಗವಹಿಸಿದ ವಧು-ವರ

Update: 2025-12-05 14:32 IST

ಹುಬ್ಬಳ್ಳಿ: ಇಂಡಿಗೋ ವಿಮಾನಗಳಲ್ಲಿ ಪೈಲಟ್‌‌ಗಳ ಕೊರತೆಯಿಂದ ದೇಶದ್ಯಾಂತ ವಿಮಾನಗಳು ರದ್ದಾಗಿರುವ ಹಿನ್ನೆಲೆಯಲ್ಲಿ ವಧು-ವರರು ಇಲ್ಲದೆ ಆರತಕ್ಷತೆ ಕಾರ್ಯಕ್ರಮ ಆನ್‌ಲೈನ್‌ ಮೂಲಕ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್‌ ನವೆಂಬರ್ 23 ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದು, ವಧುವಿನ ತವರು ಹುಬ್ಬಳ್ಳಿಯಲ್ಲಿ ಕಳೆದ ಬುಧವಾರ ದಂದು ಆರತಕ್ಷತೆ ಆಯೋಜನೆ ಮಾಡಿ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಇಂಡಿಗೋ ಏರ್‌ಲೈನ್ಸ್‌ ರದ್ದುಗೊಂಡ ಪರಿಣಾಮ ನೂತನ ವಧು-ವರರು ಆರತಕ್ಷತೆ ಕಾರ್ಯಕ್ರಮಕ್ಕೆ ಬರಲು ಆಗದೆ ತೊಂದರೆ ಅನುಭವಿಸಿದ್ದಾರೆ.

ನೂತನ ವಧು-ವರರು ವಿಮಾನ ಮೂಲಕ ಭುವನೇಶ್ವರದಿಂದ ಬೆಂಗಳೂರಿಗೆ, ನಂತರ ಅಲ್ಲಿಂದ ಹುಬ್ಬಳ್ಳಿಗೆ ಡಿ.2ಕ್ಕೆ ವಿಮಾನ ಬುಕ್ ಮಾಡಿದ್ದಿರು. ಇನ್ನು ಇವರ ಹತ್ತಿರದ ಕೆಲ ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ ವಿಮಾನ ಟಿಕೆಟ್‌ ಬುಕ್‌ ಆಗಿತ್ತು. ಆದರೆ ಏಕಾಏಕಿ ಡಿ 3 ರಂದು ಬೆಳಗ್ಗೆ ವಿಮಾನ ರದ್ದು ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರ ಕಾರ್ಯವನ್ನು ಮಾಡಿದ್ದಾರೆ. ಅತ್ತ ವಧು-ವರ, ತಾವೂ ಭುವನೇಶ್ವರದಿಂದ ಆನ್‌ಲೈನ್‌ (ವಿಡಿಯೋ ಕಾನ್ಫರೆನ್ಸ್‌) ಮೂಲಕ ಭಾಗಿಯಾಗಿ ವಿಡಿಯೋ ಮೂಲಕವೇ ಆರತಕ್ಷತೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News