Dharwad | ಸರಕಾರಿ ಹುದ್ದೆ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ; ಹಲವರು ಪೊಲೀಸ್ ವಶಕ್ಕೆ
ಧಾರವಾಡ : ಸರಕಾರಿ ಹುದ್ದೆಗೆ ನೇಮಕಾತಿ ಮಾಡದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರ ವಿರುದ್ಧ ಇಂದು(ಸೋಮವಾರ) ಜನಸಾಮಾನ್ಯರ ವೇದಿಕೆ ಹಾಗೂ ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳು ನಗರದ ಶ್ರೀನಗರ ಸರ್ಕಲ್‌ನಲ್ಲಿ ಪ್ರತಿಭಟನೆಗೆ ನಡೆಸಿದರು.
ಶ್ರೀನಗರ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಪ್ರಯತ್ನ ಮಾಡಿದರು. ಈ ವೇಳೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಎರಡು ವಾಹನಗಳಲ್ಲಿ ಕರೆದೊಯ್ದರು.
ಪ್ರತಿಭಟನೆಗೆ ಅನುಮತಿ ನೀಡಿಲ್ಲ: ಎನ್ ಶಶಿಕುಮಾರ್
ಇಂದು ನಡೆಸಲು ಮುಂದಾದ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಿಲ್ಲ. ಕಾನೂನು, ಶಾಂತಿ ಮತ್ತು ಸುವ್ಯವಸ್ಥಿತ | ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ಪ್ರತಿಭಟನಾಕಾರರ ಆಕ್ರೋಶ :
ʼನಾವು ದರೋಡೆ ಮಾಡಲು ಬಂದಿಲ್ಲ, ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಈ ತರಹ ಆಕ್ರಮಣಕಾರಿ ಧೋರಣೆ ಸಂವಿಧಾನದ ಆಶಯಗಳ ವಿರುದ್ಧವಾಗಿದೆ. ಉದ್ಯೋಗಕ್ಕಾಗಿ ಆಗ್ರಹಿಸಿದರೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಿದರುʼ ಎಂದು ಪ್ರತಿಭಟನಕಾರರು ದೂರಿದರು.
ಪ್ರತಿಭಟನಕಾರರನ್ನು ಬಿಡುಗಡೆ ಮಾಡಿ: ರೈತ ನಾಯಕರ ಆಕ್ರೋಶ
ʼಇಂದು ನಡೆದ ಘಟನೆಯಲ್ಲಿ ಪೊಲೀಸರ ವರ್ತನೆಗೆ ರೈತ ನಾಯಕರು ಆಕ್ರೋಶ ಹೊರಹಾಕಿದ್ದು, ವಶಕ್ಕೆ ಪಡೆದಿರುವ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಿ ಶ್ರೀನಗರ ವೃತ್ತಕ್ಕೆ ಕರೆ ತರಬೇಕುʼ ಎಂದು ರೈತ ಸಂಘ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.