23 ಕೋಟಿ ರೂ. ವಂಚನೆ ಪ್ರಕರಣ: ಧಾರವಾಡದಲ್ಲಿ ಹೈದರಾಬಾದ್ ಮೂಲದ ದಂಪತಿ ಬಂಧನ
ಸಾಂದರ್ಭಿಕ ಚಿತ್ರ
ಧಾರವಾಡ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ದಂಪತಿಯನ್ನು ಧಾರವಾಡ ಪೊಲೀಸರು ಬಂಧಿಸಿರುವ ಘಟನೆ ಶನಿವಾರ ವರದಿಯಾಗಿದೆ.
ಸತೀಶ ಉಪ್ಪಾಲಪಟ್ಟಿ ಹಾಗೂ ಶಿಲ್ಪಾ ಬಂಡಾ ಬಂಧಿತ ಆರೋಪಿಗಳು.
ಹೈದರಾಬಾದ್‌ನಲ್ಲಿ ಹೂಡಿಕೆದಾರರಿಗೆ 23 ಕೋಟಿ ರೂ. ವಂಚಿಸಿರುವ ಆರೋಪಿಗಳ ವಿರುದ್ಧ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ ದೂರು ದಾಖಲಾಗಿದ್ದವು. ಆದರೆ, ಇವರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಹುಬ್ಬಳ್ಳಿ-ಧಾರವಾಢ ಬೈಪಾಸ್ ಮಾರ್ಗದಲ್ಲಿ ಕಾರಿನಲ್ಲಿ ಸಾಗುತ್ತಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ದಂಪತಿಯು ಹುಬ್ಬಳ್ಳಿ-ಧಾರವಾಢ ಬೈಪಾಸ್ ಮೂಲಕ ಹೋಗುತ್ತಿದ್ದಾರೆ ಎಂದು ಹೈದರಾಬಾದ್ ಪೊಲೀಸರು ಧಾರವಾಡ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹೈದರಾಬಾದ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಹೈದರಬಾದ್ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.