×
Ad

ಹಿಂದೂ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಲಿ : ಯತ್ನಾಳ್

Update: 2025-09-20 00:27 IST

ಹುಬ್ಬಳ್ಳಿ, ಸೆ.19: ಲಿಂಗಾಯತ ಮತ್ತು ವೀರಶೈವ ಇಬ್ಬರ ಸಂಪ್ರದಾಯವೂ ಒಂದೇ ಆಗಿದ್ದು, ಹಿಂದೂ ಧರ್ಮದ ಭಾಗವಾಗಿದೆ. ಕೆಲವು ಕಮ್ಯುನಿಸ್ಟ್ ಮನಸ್ಥಿತಿ ಸ್ವಾಮೀಜಿಗಳು ಉದ್ದೇಶಪೂರ್ವಕವಾಗಿ ತಮ್ಮ ವೈಭವೀಕರಣಕ್ಕಾಗಿ, ಸ್ವಾರ್ಥಕ್ಕಾಗಿ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮವನ್ನು ಅಪಮಾನ ಮಾಡಬೇಕೆನ್ನುವುದೇ ಕೆಲವು ಮಠಾಧೀಶರ ಉದ್ದೇಶವಾಗಿದೆ. ಅದಕ್ಕಾಗಿ ಅವರು ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ ಎಂದು ದೂರಿದರು.

ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿನ ಹೋಮ-ಹವನಕ್ಕೆ ಅಪಮಾನ ಮಾಡುವುದು ಸ್ವಾಮೀಜಿಗಳ ಉದ್ದೇಶ. ಹಿಂದೂ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು, ಬಿಳಿ ಬಟ್ಟೆ ಧರಿಸಲಿ. ಅಂತಹ ಸ್ವಾಮೀಜಿ ನಮಗೆ ಬೇಕಾಗಿಲ್ಲ. ಬಿಜೆಪಿಯಿಂದ ಹಿಂದೂ ಧರ್ಮದ ಹೆಸರು ಹೇಳಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಪಕ್ಷ ಬಿಟ್ಟು ಹೋಗಲಿ ಎಂದರು.

ಬಸವಣ್ಣನನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ. ಲಿಂಗಾಯತ ವೀರಶೈವ ಅಧಿಕೃತ ಧರ್ಮವಲ್ಲ. ಅದಕ್ಕೆ ಕೇಂದ್ರ ಸರಕಾರದಿಂದ ಮಾನ್ಯತೆಯೂ ಸಿಕ್ಕಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಬೇಕೆಂದು ಕೋರಿದರು.

ಯಡಿಯೂರಪ್ಪ, ಶಾಮನೂರು ಮತ್ತು ಖಂಡ್ರೆ ಕುಟುಂಬದ ನಡುವೆ ಅಖಿಲ ಭಾರತ ವೀರಶೈವ ಮಹಾಸಭಾ ಸಿಲುಕಿಕೊಂಡಿದೆ. ಈ ಮೂವರೂ ಮಹಾ ಸಭಾದಿಂದ ಹೊರಬರಬೇಕು. ಯಡಿಯೂರಪ್ಪ ಮಹಾ ಭ್ರಷ್ಟ. ಅವರ ಉದ್ದೇಶ ಲಿಂಗಾಯತರಿಗೆ ಒಬಿಸಿ ಕೊಡುವುದಲ್ಲ. ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಏನೂ ಹೇಳಿಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಹಿಂದೂ ಎಂದು ಹೇಳಲು ನಾಚಿಕೆಯಾದರೆ ಬಹಿರಂಗವಾಗಿ ಒಪ್ಪಿಕೊಳ್ಳಿ. ಹಿಂದುತ್ವ ಇರುವುದಾದರೆ ಬಿಜೆಪಿಯಲ್ಲಿ ಇರಿ. ವಿರೋಧಿಸುವವರು ಬೇರೆ ಪಕ್ಷ ಸೇರಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಏಕತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಿಜೆಪಿ ಮುಖಂಡರನ್ನು ಮೊದಲು ಹೊರಹಾಕಬೇಕು. ಹಾಗೂ ನೋಟಿಸ್ ಕೊಡಬೇಕೆಂದು ಹೈಕಮಾಂಡ್‌ಗೆ ಒತ್ತಾಯಿಸಿದರು.

ಬಿಜೆಪಿಗೆ ಅವರಾಗಿಯೇ ಬರುವಂತೆ ಕರೆಯಬೇಕು. ಅಲ್ಲಿವರೆಗೂ ಪಕ್ಷಕ್ಕೆ ಹೋಗಲ್ಲ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಎಲ್ಲರ ಒಲವು ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News