ನರೇಂದ್ರ ಮೋದಿ ವಿಶ್ವಗುರು ಆಗಿದ್ರೆ ಮನೆಮನೆಗೆ ತೆರಳಿ ವೋಟ್ ಕೇಳುವ ಅವಶ್ಯಕತೆ ಇದೆಯಾ?: ಸಂತೋಷ್ ಲಾಡ್
ಹುಬ್ಬಳ್ಳಿ: ಬಿಜೆಪಿಯವರೇ 28% ವರೆಗೆ ಜಿಎಸ್‌ಟಿ ಏರಿಸಿ, ಇದೀಗ ಕಡಿಮೆ ಮಾಡಿ ʼಜಿಎಸ್‌ಟಿ ಬಚತ್ ಉತ್ಸವʼ ಮಾಡುತ್ತಿದ್ದಾರೆ. ಇದು ಬಿಹಾರ ಎಲೆಕ್ಷನ್‌ನ ಹೊಸ ಸ್ಕೀಮ್. ಇಂತಹ ಇನ್ನೂ ಹಲವಾರು ಸ್ಕೀಮ್‌ಗಳನ್ನು ಬಿಜೆಪಿಯವರು ತರುತ್ತಾ ಇರುತ್ತಾರೆ ಎಂದು ಸಚಿವ ಸಂತೋಷ ಲಾಡ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನರಿಂದ ದುಡ್ಡು ತಿಂದು, ಈಗ ನಾವೇ ದುಡ್ಡು ಉಳಿಸುತ್ತಿದ್ದೇವೆ, ಜಿಎಸ್‌ಟಿ ಕಡಿಮೆ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಬಹಳಷ್ಟು ವಸ್ತುಗಳ ಮೇಲೆ ಇನ್ನೂ ಬೆಲೆ ಹೆಚ್ಚಾಗಿದೆ. ಉತ್ಪನ್ನಗಳ ಬೆಲೆ ಕಡಿಮೆ ಮಾಡಿದರೆ, ಕಚ್ಚಾವಸ್ತುಗಳ ಬೆಲೆ ಹೆಚ್ಚಿಸಿದ್ದಾರೆ. ಒಂದರಲ್ಲಿ ಕಡಿಮೆ ಮಾಡಿದ್ರೆ ಇನ್ನೊಂದರಲ್ಲಿ ಹೆಚ್ಚಿಗೆ ಮಾಡಿ ಜನರ ಮುಖಕ್ಕೆ ಮಸಿ ಬಳಿದಿದ್ದಾರೆ ಎಂದರು.
ನರೇಂದ್ರ ಮೋದಿಯವರು ವಿಶ್ವಗುರು ಆಗಿದ್ರೆ ದಿನ ಬೆಳಗಾಗುತ್ತಲೇ ಮನೆಮನೆಗೆ ತೆರಳಿ ವೋಟ್ ಕೇಳುವ ಅವಶ್ಯಕತೆ ಇದೆಯಾ? ಗಡಿಯಲ್ಲಿ ನಮ್ಮ ಯೋಧರು ಯುದ್ದ ಮಾಡಿದ್ದನ್ನು ಮುಂದಿಟ್ಟು ʼಆಪರೇಷನ್ ಸಿಂಧೂರ್ʼ ನಾವು ಮಾಡಿದ್ದೇವೆಂದು ಹೇಳುತ್ತಾ ವೋಟ್ ಕೇಳಿಲಿಕ್ಕೆ ಹೋಗ್ತಿರಲ್ಲಾ, ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.
ಪೆಹಲ್ಗಾಮ್ ಘಟನೆ ನಡೆದು ಇನ್ನೂ ಮೂರು ತಿಂಗಳಾಗಿಲ್ಲ. ಈ ಮಧ್ಯೆ ಕೇಂದ್ರ ಗೃಹ ಸಚಿವರ ಮಗ ಐಸಿಸಿ ಅದ್ಯಕ್ಷ ಆಗಿರುವಾಗಲೇ ನಮಗೆ ಆತಂಕವುಂಟು ಮಾಡಿರುವ ಪಾಕಿಸ್ತಾನ ಜೊತೆಗೆ ಮ್ಯಾಚ್ ಮಾಡೋ ಅವಶ್ಯಕತೆ ಇತ್ತಾ..? ಇವರು ದೇಶದಲ್ಲಿ ಏನ ಬೇಕಾದರೂ ಮಾಡಬಹುದು, ಬೇಕೆಂದಾಗ ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿನ್ನಬಹುದು. ಮಾಚ್ ಆಡ್ಬಹುದು. ಇವರಿಗೆ ಯಾರು ಕೇಳೋರಿಲ್ಲ ಎಂದು ಟೀಕಿಸಿದರು.
ದೇಶದ ಯುವಕರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯವರು ಹಿಂದೂ ಮುಸ್ಲಿಂ ಐಕ್ಯತೆ ಒಡೆಯುವ ಕೆಲಸ ಮಾಡ್ತಿದ್ದಾರೆ. ನಮ್ಮ ದೇಶದಲ್ಲಿ ನಾವೆಲ್ಲರೂ ಒಂದಾಗಿರಬೇಕು, ಚುನಾವಣೆ ಸಮಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮುಸಲ್ಮಾನ ಇವುಗಳನ್ನು ಬಿಟ್ಟು ಬೇರೆ ಮಾತಿಲ್ಲ. ಇವುಗಳನ್ನು ಮುಂದಿಟ್ಟೆ ವೋಟ್ ಕೇಳ್ತಾರೆ. ಇದು ಬಿಟ್ಟು ಮೋದಿ ಸಾಹೇಬರ ಬಳಿ, ಬಿಜೆಪಿ ಬಳಿ ಏನೂ ಉಳಿದಿಲ್ಲ ಎಂದು ಆರೋಪಿಸಿದರು.
ಪ್ರಲ್ಹಾದ್ ಜೋಶಿ ಅವರು ಬಂದರೆ ದೇಶದ ಸಾಲದ ಬಗ್ಗೆ ಪ್ರಶ್ನಿಸಿ. ಅವರು ಬಂದು ಪ್ರೆಸ್ ಮೀಟ್ ಮಾಡಿ ಸಿದ್ದರಾಮಯ್ಯ ಸರ್ಕಾರವನ್ನು ಬೈಯ್ದು ಹೋಗ್ತಾರೆ. 1947 ರಿಂದ 2014ರ ವರೆಗೆ ಈ ದೇಶದ ಸಾಲ 55 ಲಕ್ಷ ಕೋಟಿ ಆಗಿತ್ತು. ಇದೀಗ ದೇಶದ ಸಾಲ ಇನ್ನೂರು ಲಕ್ಷ ಕೋಟಿಗೂ ಮೇಲೆ ಹೋಗಿದೆ. ಚಿನ್ನ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಒಂದು ಡಾಲರ್ ಗೆ 54ರೂ ಇದ್ದದ್ದು ಇದೀಗ 90 ರೂ. ಆಗಿದೆ. ಆದರೆ ಇದ್ಯಾವುದಕ್ಕೂ ಬಿಜೆಪಿಯವರ ಬಳಿ ಉತ್ತರ ಇಲ್ಲ ಎಂದು ಲೇವಡಿ ಮಾಡಿದರು.