Hubballi | ಅಪ್ರಾಪ್ತೆಯ ಅತ್ಯಾಚಾರ; ಹೆರಿಗೆ ಮಾಡಿಸಿ ಮಗು ಮಾರಾಟ ಆರೋಪ : ಐವರ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | Photo credit : PTI
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಬಳಿಕ, ಹೆರಿಗೆ ಮಾಡಿಸಿ ಜನಿಸಿದ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಆರೋಪಿ, ಬಾಲಕಿಯ ತಂದೆ-ತಾಯಿ ಹಾಗೂ ಇಬ್ಬರು ಖಾಸಗಿ ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಅವರು ನೀಡಿದ ದೂರಿನ ಪ್ರಕಾರ, 15 ವರ್ಷ 6 ತಿಂಗಳ ಅಪ್ರಾಪ್ತೆಯನ್ನು ಆರೋಪಿ 2025ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹುಬ್ಬಳ್ಳಿಯ ಉಣಕಲ್ ರೈಲ್ವೆ ಸೇತುವೆ ಸಮೀಪಕ್ಕೆ ಕರೆದೊಯ್ದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ
ಗರ್ಭಧಾರಣೆಯ ವಿಚಾರ ತಿಳಿದಿದ್ದರೂ, ಬಾಲಕಿಯ ಪೋಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೇ ಪ್ರಕರಣವನ್ನು ಮರೆಮಾಚಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜನಿಸಿದ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆರೋಪವೂ ದಾಖಲಾಗಿದೆ.
ಪ್ರಕರಣದಲ್ಲಿ ಹುಬ್ಬಳ್ಳಿ ತಾಲೂಕಿನ ಚಳ್ಳಮಟ್ಟಿ ಗ್ರಾಮದ ವೈದ್ಯ ಹಾಗೂ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧವೂ ಆರೋಪ ಕೇಳಿಬಂದಿದೆ. ಅಪ್ರಾಪ್ತೆಗೆ ಅಗತ್ಯ ದಾಖಲೆಗಳಿಲ್ಲದೆ ಚಿಕಿತ್ಸೆ ನೀಡಿದ್ದು, ಕಡ್ಡಾಯವಾಗಿ ಮಾಹಿತಿ ನೀಡಬೇಕಿದ್ದ ಇಲಾಖೆಗೆ ತಿಳಿಸದೆ ಪ್ರಕರಣವನ್ನು ಮರೆಮಾಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಅಪ್ರಾಪ್ತ ಬಾಲಕಿ ಮತ್ತೆ ಗರ್ಭಿಣಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಆರೋಪಿ, ಬಾಲಕಿಯ ತಂದೆ-ತಾಯಿ ಹಾಗೂ ಇಬ್ಬರು ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.