Dharwad | ಅಣ್ಣಿಗೇರಿಯಲ್ಲಿ ಗೀಸರ್ ಸಿಲಿಂಡರ್ ಸ್ಫೋಟ: ಮೂವರಿಗೆ ಗಾಯ
ಹುಬ್ಬಳ್ಳಿ/ಅಣ್ಣಿಗೇರಿ, ಜು.18: ಗೀಸರ್ ಸಿಲಿಂಡರ್ ಸ್ಫೋಟ ಸಂಭವಿಸಿ ಒಂದೇ ಕುಟುಂಬದ ಮೂವರು ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಉದಯನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಪಟ್ಟಣದ ನಿವಾಸಿ ಅಲ್ಲಾ ಬಕ್ಷ್ ಎಂಬವರ ಮನೆಯಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಅಲ್ಲಾ ಬಕ್ಷ್ ನಮಾಝ್ ಗೆ ತೆರಳಿದ್ದರು. ಅವರು ಮರಳಿ ಬರುವಷ್ಟರಲ್ಲಿ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಮನೆಯಲ್ಲಿದ್ದ ಅವರ ಪತ್ನಿ ಸಾಯಿರಾ ಬಾನು (54), ಪುತ್ರ ಅಬ್ಬಾಸ್ ಅಲಿ (29) ಹಾಗೂ ಹಸನ್ ಸಾಬ್ (26) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಬಹುತೇಕ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಮನೆಗೆ ಹಾನಿಯಾಗಿದೆ.
ಘಟನೆ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.