×
Ad

ಕದನ ವಿರಾಮ ಉಲ್ಲಂಘನೆ | ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ಪ್ರತ್ಯುತ್ತರ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2025-05-11 16:08 IST

ಪ್ರಹ್ಲಾದ್ ಜೋಶಿ (PTI)

ಹುಬ್ಬಳ್ಳಿ  : ಕದನ ವಿರಾಮ ಘೋಷಣೆಯಾದ ಮೇಲೂ ಪಾಕಿಸ್ತಾನ ದಾಳಿ ಮುಂದುವರಿಸಿ ಇಬ್ಬಗೆ ನೀತಿ ಪ್ರದರ್ಶಿಸಿದ್ದು, ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರ ಕೊಡುತ್ತದೆ. ಪಾಕ್‌ ವಿರುದ್ಧದ ದಾಳಿಗೆ ಕೇಂದ್ರ ಸರ್ಕಾರ ಸೇನೆಗೆ ಮುಕ್ತ ಅಧಿಕಾರ, ಸ್ವಾತಂತ್ರ್ಯ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕರ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಪಾಕಿಸ್ತಾನ ಯಾವತ್ತೂ ದ್ವಂದ್ವ ನಿಲುವು ಮತ್ತು ಇಬ್ಬಗೆ ನೀತಿ ಅನುಸರಿಸುವಲ್ಲಿ ಎತ್ತಿದ ಕೈ ಎಂಬುದು ಗೊತ್ತೇಯಿದೆ. ಅಲ್ಲದೇ, ಅಲ್ಲಿನ ಮಿಲಿಟರಿ ಪಡೆ ಚುನಾಯಿತ ಸರ್ಕಾರದ ಮಾತು ಕೇಳುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಕ್ರಿಯಿಸಿದರು.

ಭಾರತೀಯ ಸೇನೆ ಮೊದಲ ದಿನವೇ ಪಾಕಿಸ್ತಾನದ 9ಕ್ಕಿಂತ ಹೆಚ್ಚು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಈ ದಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಕುಟುಂಬಗಳು ಬಲಿಯಾಗಿವೆ. ಸಾಕಷ್ಟು ಭಯೋತ್ಪಾದಕ ಅಡಗುತಾಣಗಳು ಛಿದ್ರವಾಗಿವೆ. ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದರು.

ಯುದ್ಧವಾಗಿ ಪರಿಗಣಿಸುವ ಕಠಿಣ ನಿಲುವು :

ದೇಶದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅತ್ಯಂತ ಕಠೋರ ನಿಲುವು ತೆಗೆದುಕೊಂಡಿದೆ. ಪಾಕ್‌ ಕದನ ವಿರಾಮಕ್ಕೂ ಮೊದಲೇ ಭಯೋತ್ಪಾದನೆಯನ್ನು ಯುದ್ಧವಾಗಿ ಪರಿಗಣಿಸುವಂತಹ ಅಭೂತಪೂರ್ವ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

ಕದನ ವಿರಾಮ ಪ್ರಸ್ತಾಪಿಸಿದ್ದ ಪಾಕ್‌ :

ಪಾಕಿಸ್ತಾನದ ಡಿಜಿಎಂಒ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಫೋನ್‌ ಮಾಡಿ ಕದನ ವಿರಾಮಕ್ಕೆ ವಿನಂತಿ ಮಾಡಿದ್ದರು. ಆದರೀಗ ಅದನ್ನು ಉಲ್ಲಂಘಿಸಿದ್ದಾರೆ. ಯಾವತ್ತೂ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿಕೊಂಡು ಬಂದ ಪಾಕ್‌ಗೆ ಭಾರತೀಯ ಸೇನೆ ಪ್ರತ್ಯುತ್ತರ ಕೊಡುತ್ತದೆ ಎಂದು ಹೇಳಿದರು.

ಇಡೀ ದೇಶ ಒಂದಾಗಿ ಹೋರಾಡುತ್ತಿದೆ :

ಪಹಲ್ಗಾಮ್‌ ದಾಳಿಯ ನಂತರ ಇದೇ ಮೊದಲ ಬಾರಿ ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಭಾರತೀಯ ಸೇನೆ ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಎಂದು ಹೇಳಿದರು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News