×
Ad

ಧಾರವಾಡ| ಡಿಮ್ಹಾನ್ಸ್ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Update: 2026-01-28 18:52 IST

​ಧಾರವಾಡ:  ಕರ್ನಾಟಕ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ಹಾಸ್ಟೆಲ್ ಕೊಠಡಿಯಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಶಿವಮೊಗ್ಗ ಮೂಲದ ಡಾ.ಪ್ರಜ್ಞಾ ಪಾಲೇಗರ್(24) ಎಂದು ಗುರುತಿಸಲಾಗಿದೆ. ಡಾ.ಪ್ರಜ್ಞಾ ಡಿಮ್ಹಾನ್ಸ್ ಸಂಸ್ಥೆಯ ಮಾನೋ ರೋಗಶಾಸ್ತ್ರ ವಿಭಾಗದಲ್ಲಿ ಮೊದಲ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.

ಎರಡು ವಾರಗಳ ಹಿಂದೆ ಈ ಕೋರ್ಸ್‌ಗೆ ದಾಖಲಾಗಿದ್ದ ಡಾ.ಪ್ರಜ್ಞಾ ತನ್ನ ಸಹಪಾಠಿಯಾದ ಡಾ.ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಪ್ರಜ್ಞಾ ಅವರ ಪೋಷಕರು ನಿನ್ನೆ ಶಿವಮೊಗ್ಗದಿಂದ ಮಗಳನ್ನು ನೋಡಲು ಧಾರವಾಡಕ್ಕೆ ಬಂದಿದ್ದರು. ಪೋಷಕರ ಭೇಟಿಯ ಹಿನ್ನೆಲೆಯಲ್ಲಿ ಸಹಪಾಠಿ ಪ್ರಿಯಾ ಪಾಟೀಲ್ ನಿನ್ನೆ ರಾತ್ರಿ ಬೇರೆಡೆ ಉಳಿದುಕೊಂಡಿದ್ದರು. ರಾತ್ರಿ ಪೋಷಕರು ಮರಳಿ ಶಿವಮೊಗ್ಗಕ್ಕೆ ತೆರಳಿದ ನಂತರ ಕೊಠಡಿಯಲ್ಲಿ ಒಬ್ಬಳೇ ಇದ್ದ ಪ್ರಜ್ಞಾ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಸಹಪಾಠಿ ಡಾ. ಪ್ರಿಯಾ ಅವರು ಕೊಠಡಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ ಪ್ರಜ್ಞಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  

ಧಾರವಾಡ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. 

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News