Dharwada | ಹೃದಯಾಘಾತ ಎಂದು ಅಂತ್ಯಸಂಸ್ಕಾರ: ಎರಡು ತಿಂಗಳ ಬಳಿಕ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು
ಬಾಬಾಜಾನ್
ಧಾರವಾಡ, ಜ.22: ಕಳೆದ ನವೆಂಬರ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪೋಷಕರ ದೂರಿನ ಹಿನ್ನೆಲೆಯಲ್ಲಿ, ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಹೂತಿದ್ದ ಮೃತದೇಹವನ್ನು ಬುಧವಾರ ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKSRTC) ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರು (51) ಅವರು ಕಳೆದ ನ.11ರಂದು ಧಾರವಾಡದಲ್ಲಿ ನಿಧನರಾಗಿದ್ದರು. ಕುಟುಂಬಸ್ಥರು ಇದನ್ನು ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ಭಾವಿಸಿ, ಯಾವುದೇ ಮರಣೋತ್ತರ ಪರೀಕ್ಷೆ ನಡೆಸದೆ ಸ್ವಗ್ರಾಮ ಭದ್ರಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಆದರೆ ನಂತರ ಬಾಬಾಜಾನ್ ಅವರ ಸಾವಿನ ಬಗ್ಗೆ ಪೋಷಕರಿಗೆ ಅನುಮಾನ ವ್ಯಕ್ತವಾಗಿದೆ. ಅವರ ಪತ್ನಿ ವಹಿದಾಬಿ ಅವರ ನಡವಳಿಕೆಯ ಕುರಿತು ಸಂಶಯ ವ್ಯಕ್ತಪಡಿಸಿದ ಪೋಷಕರು, “ನಮ್ಮ ಮಗನ ಸಾವು ಸಹಜವಲ್ಲ. ಆಸ್ತಿ ಅಥವಾ ಬೇರೆ ದುರುದ್ದೇಶದಿಂದ ಹತ್ಯೆ ನಡೆದಿರಬಹುದು” ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾನೂನು ಕ್ರಮದಂತೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.