Hubballi | ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ | PC : Gemini AI
ಹುಬ್ಬಳ್ಳಿ : ನೀರಿನ ಸಂಪಿನಲ್ಲಿ ಆಕಸ್ಮಿಕವಾಗಿ ಬಿದ್ದು ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಗರದ ಉಣಕಲ್‌ನ ಗಣೇಶ್ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತ ಬಾಲಕನನ್ನು ಗಣೇಶ್ ಕಾಲೋನಿ ನಿವಾಸಿ ನಾಗಪ್ಪ ಹಳಿಯಾಳ ಅವರ ಪುತ್ರ ಸಿದ್ಧಾರ್ಥ ನಾಗಪ್ಪ ಹಳಿಯಾಳ (6) ಎಂದು ಗುರುತಿಸಲಾಗಿದೆ. ಸಿದ್ಧಾರ್ಥ ಸ್ಥಳೀಯ ಶಾಲೆಯಲ್ಲಿ 1ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ನೀರು ತೆಗೆಯಲು ತೆರೆದಿದ್ದ ಸಂಪಿನ ಬಳಿ ತೆರಳಿದ್ದ ಬಾಲಕ ಆಕಸ್ಮಿಕವಾಗಿ ಆಯತಪ್ಪಿ ಸಂಪಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕ ಸಂಪಿಗೆ ಬಿದ್ದಿರುವುದನ್ನು ಗಮನಿಸಿದ ತಂದೆ ನಾಗಪ್ಪ ಅವರು ಕೂಡಲೇ ಆತನನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ನಂತರ ಪಾಲಕರು ಬಾಲಕನನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.