ಧಾರವಾಡ | ಲಿಂಗಾಯತ ಮಠಾಧೀಶರ ಬೃಹತ್ ಸಮಾವೇಶ
ಧಾರವಾಡ : ಸೆಪ್ಟಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಸವ ಸಂಸ್ಕೃತಿ ಅಭಿಯಾನದ ಮುನ್ನವಾಗಿ ಆಲೂರು ವೆಂಕಟರಾವ್ ಸಭಾಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಲಿಂಗಾಯತ ಮಠಾಧೀಶರ ಬೃಹತ್ ಸಮಾವೇಶ ನಡೆಯಿತು.
ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಸಮಾವೇಶ ಉದ್ಘಾಟಿಸಿ ಮಾತನಾಡಿ, ಹನ್ನೆರಡನೇ ಶತಮಾನದ ನಂತರ ಕೆಲವು ಕಾಲ ನಮ್ಮ ಧರ್ಮದ ಬಗ್ಗೆ ನಮಗೆ ನಿಜವಾದ ಅರಿವು ಇರಲಿಲ್ಲ. ಆದರೆ ಫ.ಗು. ಹಳಕಟ್ಟಿಯವರ ಕಠಿಣ ಕಾರ್ಯದಿಂದಾಗಿ ನಮಗೆ ವಚನ ಸಾಹಿತ್ಯ ದೊರಕಿತು. ವೈದಿಕ ಆಚರಣೆಗಳಿಂದ ದೂರ ಉಳಿದು, ನಿಜಾಚರಣೆಯನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಇಳಕಲ್ಲಿನ ಗುರುಮಹಾಂತ ಮಹಾಸ್ವಾಮೀಜಿ ಮಾತನಾಡಿ, ನಾವು ಲಿಂಗಾಯತರಾದವರು. ನಮ್ಮ ಧರ್ಮದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೋರಾಡಬೇಕಿದೆ. ಧರ್ಮದ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಬಹು ಮುಖ್ಯ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರು ಭಾರತದ ರಾಷ್ಟ್ರೀಯ ನಾಯಕ ಎಂದು ಘೋಷಿಸುವ ಕಾಲ ಬಹಳ ದೂರವಿಲ್ಲ. ಅದಕ್ಕೆ ನಾವೆಲ್ಲಾ ಸೇರಿ ಈ ರೀತಿಯ ಅಭಿಯಾನಗಳನ್ನು ಮಾಡಬೇಕು. ಭಾರತದಲ್ಲಿ ಇಂದಿಗೂ ಸ್ವಾಮೀಜಿಗಳು ಎಂದರೆ ಗೌರವ, ಭಕ್ತಿ ಇದೆ. ಇದನ್ನು ನಾವು ಸದುಪಯೋಗ ಪಡಿಸಿಕೊಂಡರೆ, ಬಸವ ಧರ್ಮ ಬಹಳ ಬೇಗ ವಿಶ್ವವ್ಯಾಪಿಯಾಗಿ ಹರಡಿ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬಹುದು ಎಂದರು.
ವಿರಕ್ತಮಠ ಹಂದಿಗುಂದ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಮಠಾಧೀಶರ ಸಮ್ಮುಖದಲ್ಲಿ ನಡೆಯಲಿರುವ ಈ ಅಭಿಯಾನಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ. ಸ್ವಾಮೀಜಿಗಳಿಗೆ ಯಾವತ್ತಿದ್ದರೂ ಸಮಾಜವೇ ಮುಖ್ಯ, ನಾವು ಸಮಾಜಮುಖಿಯಾಗಿ ದುಡಿದಾಗ ಮಾತ್ರ ಸಮಾಜವು ನಮ್ಮ ಆಲೋಚನೆಗಳನ್ನು ಸ್ವಾಗತಿಸುತ್ತದೆ. ನಮ್ಮ ಧರ್ಮದ ಬೆಳಕನ್ನು ಎಲ್ಲೆಡೆ ಸೂಸಲು ಇದೊಂದು ಒಳ್ಳೆಯ ಅವಕಾಶ, ಅದಕ್ಕಾಗಿ ನಾವೆಲ್ಲಾ ಒಟ್ಟಾಗಿ ದುಡಿಯಬೇಕಿದೆ ಎಂದರು.
ಗದಗಿನ ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಗದಗಿನ ತೋಂಟದಾರ್ಯ ಸ್ವಾಮೀಜಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಥಣೀಶ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ಅಭಿಯಾನದ ಶಿರ್ಷಿಕೆ ಗೀತೆಯನ್ನು ಲೋಕಾರ್ಪಣೆಗೊಳಿಸಿದರು. ಸಮಾವೇಶದಲ್ಲಿ 288 ಬಸವತತ್ವದ ಮಠಾಧೀಶರು ಪಾಲ್ಗೊಂಡಿದ್ದರು.
ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ನಿಗಾವಹಿಸಬೇಕು. ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗಮನಹರಿಸಬೇಕು.
-ಸಾಣೇಹಳ್ಳಿ ಸ್ವಾಮೀಜಿ
‘ನಾವೆಲ್ಲಾ ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದೇ ಆದರೆ ನಾವು ಕೇಂದ್ರ ಸರಕಾರದ ಬಳಿ ಹೋಗಬೇಕಿಲ್ಲ. ಅವರೇ ನಮ್ಮ ಬಳಿಗೆ ಬಂದು ನಿಮ್ಮ ಧರ್ಮವನ್ನು ಸ್ವಂತತ್ರ ಧರ್ಮವೆಂದು ಘೋಷಿಸುತ್ತೇವೆ ಎಂದು ಹೇಳುತ್ತಾರೆ’ ಎಂದು ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.