ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ | ಆರೋಪಿಯ ಜಾಮೀನು ಅರ್ಜಿ ವಜಾ
Update: 2025-08-04 20:02 IST
ನೇಹಾ ಹಿರೇಮಠ್/ ಹತ್ಯೆ ಆರೋಪಿ ಫಯಾಝ್
ಹುಬ್ಬಳ್ಳಿ : ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಝ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಹತ್ಯೆ ಪ್ರಕರಣದ ಆರೋಪಿ ಫಯಾಝ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ, ಆ.6ರಂದು ಖುದ್ದು ಹಾಜರಿಗೆ ನ್ಯಾಯಾಲಯ ಸೂಚಿಸಿದೆ.
ಆರೋಪಿಯ ಅರ್ಜಿ ವಜಾ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನೇಹಾ ತಂದೆ ನಿರಂಜನ ಹಿರೇಮಠ್, ʼನೇಹಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ವಾಮಮಾರ್ಗದ ಮೂಲಕ ಜಾಮೀನು ಪಡೆಯಲು ಯತ್ನ ನಡೆದಿತ್ತು. ಎಲ್ಲರ ಹೋರಾಟಕ್ಕೆ ಮೊದಲ ಹಂತದಲ್ಲಿ ನ್ಯಾಯ ಸಿಕ್ಕಿದೆ. ಆರೋಪಿಗೆ ಬೇಗನೆ ಗಲ್ಲು ಶಿಕ್ಷೆಯಾಗಬೇಕುʼ ಎಂದು ಒತ್ತಾಯಿಸಿದರು.