×
Ad

ನಕಾರಾತ್ಮಕ ರಾಜಕಾರಣ ಮಾಡುತ್ತಿದ್ದವರಿಗೆ ದಿಲ್ಲಿ ಚುನಾವಣೆ ಪಾಠ : ಪ್ರಹ್ಲಾದ್ ಜೋಶಿ

Update: 2025-02-08 17:32 IST

ಪ್ರಹ್ಲಾದ್ ಜೋಶಿ 

ಹುಬ್ಬಳ್ಳಿ : ಹೊಸದಿಲ್ಲಿಯ ಜನತೆ ನಕಾರಾತ್ಮಕ ರಾಜಕಾರಣಕ್ಕೆ ಉತ್ತರ ನೀಡಿದ್ದು, ಆಪ್ ಮತ್ತು ಕಾಂಗ್ರೆಸ್‍ಗೆ ಸರಿಯಾದ ದಾರಿ ತೋರಿಸಿದ್ದಾರೆ. ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದವರಿಗೆ, ಅರಾಜಕತೆ ಸೃಷ್ಟಿಸಿದವರಿಗೆ ಬುದ್ಧಿ ಕಲಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಾದಿ-ಬೀದಿ ರಂಪ ಮಾಡುತ್ತ ನಕಾರಾತ್ಮಕ ರಾಜಕಾರಣ ಮಾಡುತ್ತಿದ್ದವರನ್ನು ದಿಲ್ಲಿ ಮತದಾರರು ತಿರಸ್ಕರಿಸಿದ್ದಾರೆ. ಜನವಿರೋಧಿ, ಅಭಿವೃದ್ಧಿ ವಿರೋಧಿಗಳಿಗೆ ದಿಲ್ಲಿಯ ಜನತೆ ಮನೆಯ ಹಾದಿ ತೋರಿದ್ದಾರೆ. ಪ್ರಧಾನಿ ಮೋದಿ ಸ್ವಚ್ಛ, ಶುದ್ಧ ಆಡಳಿತವನ್ನು ಬೆಂಬಲಿಸಿದ್ದಾರೆ ಎಂದು ವಿಶ್ಲೇಷಿಸಿದರು.

ದಿಲ್ಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಐತಿಹಾಸಿಕ, ಅಭೂತಪೂರ್ವ ಗೆಲುವು ಸಾಧಿಸಿ ಪ್ರಚಂಡ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದೆ. ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ ಕೇಜ್ರಿವಾಲ್ ದುರಹಂಕಾರದ ಮನಸ್ಥಿತಿ ಮತ್ತು ರಾಜಕೀಯ ವಿಭಜಕದಲ್ಲಿ ತೊಡಗಿದ್ದವರನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.

ನಶಿಸಿದ ಕಾಂಗ್ರೆಸ್: ಕಾಂಗ್ರೆಸ್ ನಶಿಸಿ ಹೋಗಿದೆ. ದಿಲ್ಲಿಯಲ್ಲಿ ಶೂನ್ಯ ಸಂಪಾದನೆ ಮೂಲಕ ರಾಹುಲ್ ಗಾಂಧಿ ನೇತೃತ್ವವನ್ನು ಸಂಪೂರ್ಣ ತಿರಸ್ಕರಿಸಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಬಾರದು. ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದ ಸ್ಥಿತಿ ಒಳ್ಳೆಯದಲ್ಲ. ಕಾಂಗ್ರೆಸ್ ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News