×
Ad

ಆರೆಸ್ಸೆಸ್ ನೋಂದಣಿ ಮಾಡಿಕೊಳ್ಳಬೇಕೆಂದು ಕಾನೂನು ಎಲ್ಲಿದೆ? : ಆರ್.ಅಶೋಕ್

Update: 2025-10-23 18:37 IST

ಆರ್.ಅಶೋಕ್

ಹುಬ್ಬಳ್ಳಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಅನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಕಾನೂನು ಎಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದಾದರೂ ಸಂಘ ನೋಂದಣಿ ಮಾಡಿಸಬೇಕು ಅಂತ ಕಾನೂನು ಇದೆಯಾ? ಈ ಸರಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿಹಾಕಲು ಆರೆಸ್ಸೆಸ್ ವಿವಾದ ತಂದಿದೆ. ಆರೆಸ್ಸೆಸ್‍ಗೆ ಬರುವ ಹಣದ ಮೂಲದ ಬಗ್ಗೆ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಮೊದಲು ತಮಗೆ ಎಲ್ಲಿಂದ ದುಡ್ಡು ಬರುತ್ತಿದೆ ಎಂಬುದನ್ನು ಘೋಷಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಆರೆಸ್ಸೆಸ್ ದೇಶ ಪ್ರೇಮ ಬೆಳೆಸುವ ಸಂಸ್ಥೆ. ಆರೆಸ್ಸೆಸ್ ಹೆಸರಿನಲ್ಲಿ ಯಾವುದೆ ಕಟ್ಟಡಗಳು ನೋಂದಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಂದ ದುಡ್ಡು ಬರುತ್ತೆ ಅಂತ ಪ್ರಿಯಾಂಕ್ ಖರ್ಗೆ ಹೇಳಲಿ. ಆರೆಸ್ಸೆಸ್ ಬಗ್ಗೆ ಕೇಳಲು ಸಂಸ್ಥೆಗಳಿವೆ, ಅವರು ಪ್ರಶ್ನೆ ಕೇಳುತ್ತಾರೆ ಎಂದು ಅಶೋಕ್ ಹೇಳಿದರು.

ಅತಿವೃಷ್ಠಿಯಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡಲು ಇವರಿಗೆ ಯೋಗ್ಯತೆ ಇಲ್ಲ. ಈ ಸರಕಾರ ಪಾಪರ್ ಆಗಿದೆ. ಇವೆಲ್ಲ ವಿಚಾರಗಳ ಹಾದಿ ತಪ್ಪಿಸಲು ಆರೆಸ್ಸೆಸ್ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಅವರು ಕಿಡಿಗಾರಿದರು.

ಚಿತ್ತಾಪುರದಲ್ಲಿ ಒಂದೇ ದಿನ ಎರಡು ಸಂಘಟನೆಗಳು ಪಥ ಸಂಚಲನಕ್ಕಾಗಿ ಅನುಮತಿ ಕೋರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಯಾರಿಗೆ ಬೇಕಾದರೂ ಕಾರ್ಯಕ್ರಮ, ಮೆರವಣಿಗೆ ಮಾಡಲು ಅನುಮತಿ ನೀಡಬಹುದು. ದಲಿತ, ಲಿಂಗಾಯತ, ಒಕ್ಕಲಿಗರು ಯಾರೇ ಮೆರವಣಿಗೆ ಮಾಡಲಿ ಅದಕ್ಕೆ ಕಾನೂನಲ್ಲಿ ಅವಕಾಶ ಇದೆ. ಭೀಮ್ ಆರ್ಮಿ ಕಾರ್ಯಕ್ರಮ ಮಾಡಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.

ಈ ಸರಕಾರ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಇಲ್ಲ, ಸುವ್ಯವಸ್ಥೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಜಾವಾದಿ ಆಗಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ದುರುಪಯೋಗದಲ್ಲಿ ತೊಡಗಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‍ಗೆ ಆ ಪರಮೇಶ್ವರನೆ ಗತಿ. ಏನು ಕೇಳಿದರೂ ಗೊತ್ತಿಲ್ಲಾ, ಕೇಳುತ್ತೇನೆ ಅಂತಾರೆ ಎಂದು ಅಶೋಕ್‌ ವ್ಯಂಗ್ಯವಾಡಿದರು.

ಕಾನೂನು ಮತ್ತು ಸುವ್ಯವಸ್ಥೆ ಎರಡು ಇಲ್ಲದೆ ಇರುವ ರಾಜ್ಯ ಅಂದರೆ ಅದು ಕರ್ನಾಟಕ. ನಿತ್ಯ ಕೊಲೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಅಪರಾಧ ಕೃತ್ಯಗಳು ನಡೆಯುತ್ತಲೆ ಇವೆ. ರಾಜ್ಯ ಸರಕಾರ ಸೂಕ್ಷ್ಮತೆ ಇಲ್ಲದೆ ಅಧಿಕಾರ ನಡೆಸುತ್ತಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News