ಹುಬ್ಬಳ್ಳಿ | ಆರೆಸ್ಸೆಸ್ ನಿಷೇಧಿಸಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ; ರಾಷ್ಟ್ರೀಯ ಅಹಿಂದ ಸಂಘಟನೆ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಹುಬ್ಬಳ್ಳಿ : ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಅಹಿಂದ ಸಂಘಟನೆ ವತಿಯಿಂದ ರವಿವಾರ ಅಂಬೇಡ್ಕರ್ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.
ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಜೊತೆಗೆ ಸಂವಿಧಾನ ಪೀಠಿಕೆ ಓದುವುದರ ಮೂಲಕ ‘ಆರೆಸ್ಸೆಸ್ ಹಠಾವೋ, ಸಂವಿಧಾನ ಬಚಾವೋ’ ಅರೆಬೆತ್ತಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರಾಷ್ಟ್ರೀಯ ಅಹಿಂದ ಸಂಘಟನೆಯ ನೂರಾರು ಕಾರ್ಯಕರ್ತರು ಮನುಸ್ಮೃತಿ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಚಿತ್ತಾಪುರ ಭೀಮ್ ಆರ್ಮಿ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಆರೆಸ್ಸೆಸ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಅಂಬೇಡ್ಕರ್ ವೃತದಿಂದ ಚನ್ನಮ್ಮ ಸರ್ಕಲ್‌ವರೆಗೆ ಅರಬೆತ್ತಲೆ ಮೆರವಣಿಗೆ ಹೊರಟಿದ್ದ ಧರಣಿನಿರತರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಸಿ.ಆರ್. ಮೈದಾನದ ಸಮೀಪ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅಹಿಂದ ರಾಷ್ಟ್ರೀಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ಯೂಸುಫ್ ಬಳ್ಳಾರಿ, ಬಾಬಾಜಾನ ಮುದೋಳ , ಬಾಳೇಶ ಮಣ್ಣೊಳ್ಳಿ, ರಾಜು ಮಾದರ, ಶಿವಮೊಗ್ಗ ಜಿಲ್ಲಾಧ್ಯಕ್ಷ ಜಯರಾಮ್ ಶೆಟ್ಟಿ, ರಾಯಚೂರು ಜಿಲ್ಲಾಧ್ಯಕ್ಷ ಶಿವಪ್ಪ ಪೂಜಾರ, ರಮೇಶ ಚಲವಾದಿ, ನಿಂಗಪ್ಪ ಪ್ಯಾಟಿ, ಪ್ರಕಾಶ ನಾಯಕ, ಜಯಶ್ರೀ ದೇಶಪಾಂಡೆ, ಪುಷ್ಪಾ ಹಿರೇಮಠ, ತನ್ವೀರ್ ಮುಳಗುಂದ, ರಾಜು ಸನದಿ ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಮಹಾತ್ಮಾ ಗಾಂಧೀಜಿ ಅವರನ್ನು ಕೋಲೆ ಮಾಡಿರುವ ಮತ್ತು ಭಾರತದ ಸಂವಿಧಾನವನ್ನು ಒಪ್ಪದ ಆರೆಸ್ಸೆಸ್ ಸಂಘಟನೆಯನ್ನೂ ತಕ್ಷಣವೇ ನಿಷೇಧಿಸಬೇಕು. ಈ ಸಂಘಟನೆ ಚಿಕ್ಕ ಮಕ್ಕಳಲ್ಲಿ ಜಾತಿ ವಿಷ ಬೀಜ ಬಿತ್ತುವುದರ ಜೊತೆಗೆ ದೇಶ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾ ಬಂದಿದೆ. ಸ್ವಾತಂತ್ರ್ಯ ನಂತರದಲ್ಲಿ ನಮ್ಮ ದೇಶದ ಧ್ವಜವನ್ನು ವಿರೋಧಿಸಿರುವ ಈ ರಾಷ್ಟ್ರದ್ರೋಹಿ ಸಂಘಟನೆ ಇನ್ನೂ ನೋಂದಣಿಯಾಗದೆ ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ, ನಾವು ಮನುಸ್ಮೃತಿಯನ್ನು ರಸ್ತೆಯಲ್ಲಿ ಸುಡುವುದರ ಮೂಲಕ ವಿರೋಧಿಸುತ್ತೇವೆ.
ಮುತ್ತಣ್ಣ ಶಿವಳ್ಳಿ, ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ
ರಾಜ್ಯದಲ್ಲಿ ಸಂವಿಧಾನ ಉಳಿವಿಗಾಗಿ ಹೋರಾಟ ಮಾಡುವ ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಅಹಿಂದ ವರ್ಗದ ಪರವಾಗಿ ಇರುವ ಸರಕಾರ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ ಸರಕಾರದಲ್ಲಿ ಕೋಲು ಬಡಿಗೆಗಳನ್ನು ಹಿಡಿದುಕೊಂಡು ನಗರವನ್ನು ಸುತ್ತಾಡಲು ಪರವಾಣಿಗೆ ನೀಡಲಾಗುತ್ತಿದೆ. ನಾವು ಬಾಬಾಸಾಹೇಬರು ಬರೆದಿರುವ ಸಂವಿಧಾನದ ಪ್ರತಿಯನ್ನು ಓದಿಕೊಂಡು ಮೆರವಣಿಗೆ ಹೊರಟರೆ ನಮ್ಮನ್ನು ಬಂಧಿಸುತ್ತಾರೆ. ಇಂದು ಸಂವಿಧಾನದ ಆಶಯಗಳ ಕಗ್ಗೊಲೆ ಆಗುತ್ತಿದ್ದು, ಹುಬ್ಬಳ್ಳಿಯ ಪೊಲೀಸರು ಆರೆಸ್ಸೆಸ್ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮನ್ನು ಬಂಧಿಸಿದ ತಕ್ಷಣ ಅಹಿಂದ ಸಂಘಟನೆ ಹೋರಾಟವನ್ನು ದುರ್ಬಲ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡಿ ಸಂವಿಧಾನದ ರಕ್ಷಣೆಗೆ ಕರೆ ನೀಡುತ್ತೇವೆ.
ಜೋಸೆಫ್ ಉದೋಜಿ, ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಉಪಾಧ್ಯಕ್ಷ, ವಕೀಲ