×
Ad

ಮೇ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ : ಸಲೀಂ ಅಹ್ಮದ್

Update: 2025-03-16 21:09 IST

ಸಲೀಂ ಅಹ್ಮದ್

ಹುಬ್ಬಳ್ಳಿ : ರಾಜ್ಯ ಸಚಿವ ಸಂಪುಟವು ಮೇ ತಿಂಗಳಲ್ಲಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ರಚನೆಯಾದಾಗಲೇ ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ. ಈಗಾಗಲೇ ಅವರಿಬ್ಬರೂ ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಸ್ವಾಗತಿಸಿದ್ದಾರೆ. ಅವರ ಪಕ್ಷ ಸೇರ್ಪಡೆ ವಿಚಾರದ ಬಗ್ಗೆ ಕಾದು ನೋಡಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಹಲವಾರು ಮುಖಂಡರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಯಾರನ್ನೂ ಯಾವಾಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಲೀಂ ಅಹ್ಮದ್ ತಿಳಿಸಿದರು.

ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆಕೆಗೆ ನಮ್ಮ ಪಕ್ಷದ ಯಾವ ಸಚಿವರು ಬೆಂಬಲ ನೀಡಿಲ್ಲ. ಒಂದು ವೇಳೆ ಈ ಸಂಬಂಧ ದಾಖಲೆಗಳಿದ್ದರೆ ಬಿಜೆಪಿಯವರು ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ರಕ್ಷಣೆ ನೀಡುವುದಿಲ್ಲ ಎಂದು ಸಲೀಂ ಅಹ್ಮದ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News