×
Ad

ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ಅಗತ್ಯ: ಸಚಿವ ಸತೀಶ ಜಾರಕಿಹೊಳಿ

"ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ"

Update: 2025-10-06 23:37 IST

ಹುಬ್ಬಳ್ಳಿ: ಕಿತ್ತೂರು ಕರ್ನಾಟಕ ಭಾಗಕ್ಕೂ ಅನುದಾನ ನೀಡುವುದು ಅಗತ್ಯವಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ನೀಡಿದ ಮಾದರಿಯಲ್ಲಿ ನಮಗು ನೀಡಲು ಮನವಿ ಮಾಡಿದ್ದೇವೆ. ಇದಕ್ಕಾಗಿ ಕಿತ್ತೂರು ಕರ್ನಾಟಕದ 34 ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತೂರ ಕರ್ನಾಟಕ ಭಾಗವು ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿಯೂ ಅಭಿವೃದ್ಧಿಗೆ ಹಣಕಾಸಿನ ಅಗತ್ಯವಿದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕುಳಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.

ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸಹಜವಾಗಿ ಪೈಪೋಟಿ ಇರುತ್ತದೆ. ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದ ಸತೀಶ್ ಜಾರಕಿಹೊಳಿ, ನವೆಂಬರ್ ಕ್ರಾಂತಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಜಾತಿ ಜನಗಣತಿಯ 60 ಪ್ರಶ್ನಾವಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸುಸ್ತಾಗಿ ಸರಳೀಕರಣ ಮಾಡಲು ಹೇಳಿರುವುದಕ್ಕೆ ನನ್ನದೂ ಸಹಮತ ಇದೆ. ಪ್ರಶ್ನೆಗಳನ್ನು ಕಡಿಮೆ ಮಾಡಬೇಕು. ಅಲ್ಲದೆ ಜನರು ತಮಗೆ ಇಷ್ಟ ಇರುವ ಪ್ರಶ್ನೆಗೆ ಮಾತ್ರ ಉತ್ತರಿಸಬಹುದಾಗಿದೆ. ಪ್ರಶ್ನಾವಳಿ ತಯಾರಿಸಿದ್ದು ಆಯೋಗದವರು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಅವರು ಸರಕಾರಕ್ಕೆ ಎಲ್ಲವನ್ನೂ ತಿಳಿಸಬೇಕೆಂದಿಲ್ಲ ಎಂದು ಜಾರಕಿಹೊಳಿ ಹೇಳಿದರು.

ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಅ.15ರ ನಂತರ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು. ಮೊದಲ ಹಂತದಲ್ಲಿ ಗುಂಡಿ ಮುಚ್ಚಲು 700 ಕೋಟಿ ರೂ. ನೀಡಲಾಗಿದೆ. ನಂತರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಸೂಚಿ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು.

ಕರ್ನಾಟಕದಲ್ಲಿ ಪದೇ ಪದೇ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಕೇಳಿ ಬರುತ್ತಾ ಇದ್ದು, ಈ ವಿಷಯದಲ್ಲಿ ನಾವು ನಮ್ಮ ಪಕ್ಷ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ . ಕಳೆದ ಬಾರಿ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಕೇಂದ್ರಕ್ಕೆ ಪ್ರಸ್ತಾವ ಕಳಿಸಿತ್ತು ಎಂದು ಉತ್ತರಿಸಿದರು.

ಖಂಡನೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿದ ಸತೀಶ್ ಜಾರಕಿಹೊಳಿ, ಆರೋಪಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News