×
Ad

ಗದಗದಲ್ಲಿ ರೈತರಿಂದ ಅಹೋರಾತ್ರಿ ಧರಣಿ; ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

Update: 2025-11-15 23:28 IST


ಗದಗ : ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೀಶ್ವರ ಪಟ್ಟಣದಲ್ಲಿ ರೈತ ಸಂಘಟನೆ ಹಾಗೂ ಪ್ರಗತಿಪರ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ ಮಾಡಿದ್ದಾರೆ.

ನಗರದ ಸೋಮನಾಥ ದೇವಸ್ಥಾನದಿಂದ ಪಾದಯಾತ್ರೆ ಮುಖಾಂತರ ಅಹೋರಾತ್ರಿ ಹೋರಾಟಕ್ಕೆ ಚಾಲನೆ ನೀಡಿದ ರೈತರು, ಭಜಾರ ಲೈನ್ ಮುಖಾಂತರ ಲಕ್ಷ್ಮೀಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಸಾಂಕೇತಿಕವಾಗಿ ಗದಗ-ಲಕ್ಷ್ಮೀಶ್ವರ ರಸ್ತೆ ತಡೆ ನಡೆಸಿ ಅಹೋರಾತ್ರಿ ಧರಣಿಗೆ ಮುಂದಾದರು.

ಈ ಭಾಗದ ರೈತರ ಗೋವಿನ ಜೋಳದ ಫಸಲು ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನು ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ರೈತ ಮುಖಂಡ ಟಾಕಪ್ಪ ಸಾತಪತಿ ಮಾತನಾಡಿ, ಶಿರಹಟ್ಟಿ ಭಾಗವು ಅತಿ ಹೆಚ್ಚು ಗೋವಿನ ಜೋಳ ಬೆಳೆಯನ್ನು ಬೆಳೆದಿದ್ದು ಖರೀದಿ ಕೇಂದ್ರ ಪ್ರಾರಂಭದ ನಿರೀಕ್ಷೆಯಲ್ಲಿದ್ದೇವೆ. ಮನೆಯಲ್ಲಿ ಸಂಗ್ರಹಿಸಿ ಇಟ್ಟ ಗೋವಿನ ಜೋಳಕ್ಕೆ ಕೀಟ ಕಾಟ ಪ್ರಾರಂಭವಾಗುವ ಮೊದಲು ಸರಕಾರ ಎಚ್ಚೆತ್ತುಕೊಂಡು ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು, ರೈತರ ಆರ್ಥಿಕ ಸಂಕಷ್ಟಗಳನ್ನು ಬಂಡವಾಳ ಮಾಡಿಕೊಂಡ ಖಾಸಗಿ ವರ್ತಕರು ಹಾಗೂ ದಲ್ಲಾಳಿಗಳು ಗೋವಿನಜೋಳವನ್ನು 1,500ರೂ. ಗಳಿಂದ 1,600 ರೂ. ಗಳವರೆಗೆ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸರಕಾರ ಈ ಕೂಡಲೇ ಖರೀದಿ ಕೇಂದ್ರ ಪ್ರಾರಂಭಮಾಡುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

ಇನ್ನು ಧರಣಿ ಸ್ಥಳಕ್ಕೆ ಶಿರಹಟ್ಟಿ-ಲಕ್ಷ್ಮೀಶ್ವರ ತಹಶೀಲ್ದಾರರು ಆಗಮಿಸಿ ರೈತರ ಮನವೊಲಿಸಲು ಪ್ರಯತ್ನ ಮಾಡಿದರು. ಆದರೆ ರೈತರು ಸರಕಾರದಿಂದ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭವಾದ ನಂತರ ನಾವು ಮನೆಗೆ ಹೋಗುತ್ತೇವೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಧರಣಿಯಲ್ಲಿ ರೈತ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗಪ್ಪ ಚಂಚಲಿ,ಚನ್ನಪ್ಪ ಸಣ್ಣಕ್ಕಿ, ಬಸಪ್ಪ ಬೆಂಡಿಗೇರಿ, ಹೊನಪ್ಪ ಒಡ್ಡರ ಹಾಗೂ ರೈತರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News