ರೋಣ: ಜಮಾಅತೆ ಇಸ್ಲಾಮೀ ಹಿಂದ್ ನಿಂದ 'ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ.)' ವಿಚಾರಗೋಷ್ಠಿ
ಗದಗ: "ಪ್ರವಾದಿ ಮುಹಮ್ಮದ್ (ಸ.) ಇಡೀ ವಿಶ್ವಕ್ಕೆ ದೈವಿಕ ಮಾರ್ಗದರ್ಶನದಂತೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದರು. ಯಾರನ್ನೂ ಕೀಳಾಗಿ, ತುಚ್ಚವಾಗಿ ಕಾಣಬಾರದು ಎಂಬುದು ಅವರ ಸಂದೇಶದ ಪ್ರಮುಖ ಭಾಗವಾಗಿತ್ತು" ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ಅವರು ಜಮಾಅತೆ ಇಸ್ಲಾಮೀ ಹಿಂದ್ ರೋಣ ವತಿಯಿಂದ ಸ್ಥಳೀಯ ಮದೀನಾ ಮಸೀದಿಯಲ್ಲಿ ಆಯೋಜಿಸಿದ್ದ 'ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್(ಸ.)' ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಐ.ಎಸ್ ಪಾಟೀಲ್ ಮಾತನಾಡಿ, "ಎಲ್ಲ ಧರ್ಮಗಳು ಜನರನ್ನು ಪ್ರೀತಿಸಲು ಕಲಿಸುತ್ತವೆ. ಆದ್ದರಿಂದ ನಾವೆಲ್ಲರೂ ಕೂಡಿ ಬಾಳುವುದರ ಮೂಲಕ ಬಲಿಷ್ಠ ಭಾರತವನ್ನು ಕಟ್ಟಲು ಪ್ರಯತ್ನಿಸಬೇಕು" ಎಂದು ಹೇಳಿದರು.
ಜ. ಇ. ಹಿಂದ್ ಕರ್ನಾಟಕ ಇದರ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜ.ಇ.ಹಿಂದ್ ಗದಗ ಜಿಲ್ಲಾ ಸಂಚಾಲಕ ಮೌಲಾನ ಮುಹಮ್ಮದ್ ಫಾರೂಕ್ ಉಮರಿ ಕಿರಾಅತ್ ಪಠಿಸಿದರು.
ಜ.ಇ. ಹಿಂದ್ ರೋಣ ಅಧ್ಯಕ್ಷ ಫ್ಯಝ್ ಅಹ್ಮದ್ ಕಲಾದಗಿ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ರಝಾ ಕಲ್ಮನಿ ವಂದಿಸಿದರು.