ಗದಗ | ಬಾಕಿ ಹಣ ಕೊಡುವ ವಿಚಾರಕ್ಕೆ ಗಲಾಟೆ: ಆರು ಮಂದಿಗೆ ಗಾಯ
ಗದಗ, ಅ.2: ಬೀಡಿ ಅಂಗಡಿಯಲ್ಲಿ ಬಾಕಿ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ಗುರುವಾರ ವರದಿಯಾಗಿದೆ.
ಘಟನೆಯಲ್ಲಿ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಹಾಗೂ ವಿರೂಪಾಕ್ಷ ಹಿರೇಮಠ ಎಂಬವರು ಗಾಯಗೊಂಡಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತಳಗೇರಿಯಲ್ಲಿ ಅಬ್ದುಲ್ ಘನಿ ಎಂಬಾತ ಬೀಡಾ ಅಂಗಡಿ ಇಟ್ಟಿದ್ದು, ಸಿಗರೇಟ್, ಟೀ ಕೂಡ ಮಾರಾಟ ಮಾಡುತ್ತಿದ್ದ. ಇದೇ ಅಂಗಡಿಗೆ ಬರುತ್ತಿದ್ದ ದೇವಪ್ಪ ಪೂಜಾರ್ ಎಂಬಾತ ತುಂಬಾ ದಿನಗಳಿಂದ ಸಿಗರೇಟ್, ಟೀ ಹಣ ಕೊಡದೆ ಬಾಕಿ ಉಳಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಅಂಗಡಿಯಲ್ಲಿ ಹಣ ಬಾಕಿ ಉಳಿಸಿಕೊಂಡಿದ್ದರೂ ದೇವಪ್ಪ ಪಕ್ಕದ ಅಂಗಡಿಗೆ ಹೋಗಿದ್ದು, ತನಗೆ ಕೊಡಬೇಕಿದ್ದ 2,500 ಬಾಕಿ ಹಣ ಕೊಡುವಂತೆ ಅಬ್ದುಲ್ ಘನಿ ಕೇಳಿದ್ದಾನೆ ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಗಲಾಟೆಯಲ್ಲಿ ಏಟು ತಿಂದಿದ್ದ ದೇವಪ್ಪ, ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಸ್ಥಳಕ್ಕೆ ಬಂದಿದ್ದ ಸ್ನೇಹಿತರಿಂದ ಗಲಾಟೆ ನಡೆದು ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದರಿಂದ ಕುಪಿತಗೊಂಡ ಮತ್ತೊಂದು ಗುಂಪು, ದೇವಪ್ಪ ಸಹಚರರೊಂದಿಗೆ ಗಲಾಟೆ ನಡೆಸಿದೆ. ಈ ಘರ್ಷಣೆಯಲ್ಲಿ ದೇವಪ್ಪ, ಸ್ನೇಹಿತರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಘಟನೆಯಿಂದ ಶಿರಹಟ್ಟಿ ಪಟ್ಟಣದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ.
ಈ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.