ಗದಗ: ಕೃಷಿ ಹೊಂಡದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
Update: 2025-11-13 11:33 IST
ಗದಗ: ಅಪರಿಚಿತ ವ್ಯಕ್ತಿಯೋರ್ವನ ಬೆತ್ತಲೆ ಮೃತದೇಹ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ತಾಲೂಕಿನ ಕಣಗಿನಹಾಳ ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ.
ಮುಖ, ಕುತ್ತಿಗೆ ಹಾಗೂ ತಲೆಯಲ್ಲಿ ಗಾಯ ಕಂಡುಬಂದಿದ್ದು, ಬೆತ್ತಲೆಗೊಳಿಸಿ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಣಗಿನಹಾಳ ಗ್ರಾಮದ ಈಶಪ್ಪ ಕುರಿ ಎಂಬವರ ಜಮೀನಿನ ನೀರಿನ ಹೊಂಡದಲ್ಲಿ ಸುಮಾರು 35ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಒಳ ಉಡುಪಿನಿಂದ ಕೈ ಹಾಗೂ ಪ್ಯಾಂಟ್ ನಿಂದ ಕಾಲುಗಳನ್ನು ಕಟ್ಟಿ ನೀರಲ್ಲಿ ಬಿಸಾಕಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ.
ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಝಾ ಖಾದ್ರಿ ಹಾಗೂ ಸಿಪಿಐ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.