ಗದಗ | ಬಾಹ್ಯಾಕಾಶ ವಿಜ್ಞಾನಿ ಡಾ. ನಾಡಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ
ಡಾ. ನಾಡಗೌಡ
ಗದಗ, ಅ.30: ಭಾರತದ ಬಾಹ್ಯಾಕಾಶ ವಿಜ್ಞಾನಕ್ಕೆ ಅಮೂಲ್ಯ ಸೇವೆ ಸಲ್ಲಿಸಿರುವ ಗದಗ ಜಿಲ್ಲೆಯ ಮೂಲದ ಡಾ. ರಾಮನಗೌಡ ವೆಂಕನಗೌಡ ನಾಡಗೌಡ ಅವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಅವರು ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ)ಯ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ವಿಜ್ಞಾನಿ ಹಾಗೂ ಯೋಜನೆಗಳ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಭಾರತದ ಬಾಹ್ಯಾಕಾಶ ಸಾಧನೆಗಳ ಹಿಂದೆ ಅವರ ತಾಂತ್ರಿಕ ದೃಷ್ಟಿ ಮತ್ತು ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ರೈತನ ಮನೆತನದಲ್ಲಿ ಜನಿಸಿದ ಡಾ. ನಾಡಗೌಡರು, ಶಾಲಾ ದಿನಗಳಿಂದಲೇ ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡವರು. ಧಾರವಾಡದ ಕೆ.ಇ. ಬೋರ್ಡ್ ಶಾಲೆ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಹಾಗೂ NITK ಸುರತ್ಕಲ್‌ನಲ್ಲಿ ವಿದ್ಯುನ್ಮಾನ ಇಂಜಿನಿಯರಿಂಗ್ ಹಾಗೂ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದಿದ್ದಾರೆ.
1989ರಲ್ಲಿ ಇಸ್ರೋದಲ್ಲಿ ವಿಜ್ಞಾನಿಯಾಗಿ ಸೇವೆ ಆರಂಭಿಸಿದ ಅವರು, ಕಾರ್ಟೊಸಾಟ್–1, ಇನ್ಸಾಟ್–4ಬಿ, ಆಸ್ಟ್ರೋಸಾಟ್, ಚಂದ್ರಯಾನ, ಮಂಗಳಯಾನ, ರೀಸಾಟ್ ಸರಣಿ, ಆದಿತ್ಯ ಎಲ್–1, ನಿಸಾರ್ ಮತ್ತು ಗಗನಯಾನ ಸೇರಿದಂತೆ ಅನೇಕ ಪ್ರಮುಖ ಉಪಗ್ರಹ ಯೋಜನೆಗಳಲ್ಲಿ ತಾಂತ್ರಿಕ ನಾಯಕತ್ವ ವಹಿಸಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೊಂಡ ರೀಸಾಟ್ ಉಪಗ್ರಹಗಳು ದೇಶದ ಭದ್ರತೆಯ ಕಣ್ಗಾವಲು ಎಂದು ಪರಿಗಣಿಸಲ್ಪಟ್ಟಿವೆ. ಇತ್ತೀಚಿನ ʼಆಪರೇಷನ್ ಸಿಂಧೂರ್ʼ ಯಶಸ್ಸಿನಲ್ಲಿಯೂ ಈ ಉಪಗ್ರಹಗಳ ಪಾತ್ರ ಮಹತ್ವದ್ದಾಗಿದೆ. ಉಪಗ್ರಹಗಳ ಅಸೆಂಬ್ಲಿ, ಪರೀಕ್ಷೆ ಮತ್ತು ದೃಢೀಕರಣಕ್ಕಾಗಿ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣ ಹಾಗೂ ಸ್ವದೇಶೀಕರಣದ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚವನ್ನು ಉಳಿತಾಯ ಮಾಡಿರುವುದು ಅವರ ಮಹತ್ತರ ಕೊಡುಗೆಯಾಗಿದೆ.
ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳಿಗೆ ಜೀವ ತುಂಬಿದ ಡಾ. ನಾಡಗೌಡರು, ಬಾಹ್ಯಾಕಾಶ ತಂತ್ರಜ್ಞಾನವನ್ನು ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳೊಂದಿಗೆ ಸಂಪರ್ಕಿಸಿ ನವೋದ್ಯಮ ಹಾಗೂ ಸ್ವಾವಲಂಬನೆಯನ್ನು ಉತ್ತೇಜಿಸಿದ್ದಾರೆ.
ವಿಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸಲು “ರಾಷ್ಟ್ರೀಯ ಬಾಹ್ಯಾಕಾಶ ದಿನ”, “ವಿಶ್ವ ಬಾಹ್ಯಾಕಾಶ ದಿನ”, “ಇಸ್ರೋ ರೋಬೋಟಿಕ್ಸ್ ಸ್ಪರ್ಧೆ” ಹಾಗೂ “ಕನ್ನಡ ತಾಂತ್ರಿಕ ಕಮ್ಮಟ”ಗಳಂತಹ ಅನೇಕ ಕಾರ್ಯಕ್ರಮಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಮೂಡಿಸಿದ್ದಾರೆ.
ತಮ್ಮ ಶ್ರೇಷ್ಠ ಸೇವೆಗಾಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅವರು, ಗ್ರಾಮೀಣ ಹಿನ್ನೆಲೆಯಿಂದ ಬಂದು ವಿಶ್ವದ ಬಾಹ್ಯಾಕಾಶ ವೇದಿಕೆಯಲ್ಲಿ ಭಾರತದ ಹೆಸರನ್ನು ಬೆಳಗಿಸಿರುವ ಅಪರೂಪದ ವಿಜ್ಞಾನಿಗಳಲ್ಲಿ ಒಬ್ಬರು.