ಗದಗ : ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಿಂತ ಕೃಷಿ ಉತ್ಪನ್ನದ, ಮೌಲ್ಯವರ್ಧನೆಗೆ ಒತ್ತುವ ನೀಡುವ ಅಗತ್ಯವಿದೆ, ಸಂಘಟಿತ ಮಾರುಕಟ್ಟೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಮೂಲಕ ರೈತರ ಆದಾಯವನ್ನು ಸುಧಾರಿಸುವತ್ತ ಗಮನ ಹರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಶನಿವಾರ ಗದಗದ ಮಹಾತ್ಮಾ ಗಾಂಧೀ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಕೃಷಿ ವಹಿವಾಟಿನ ಕಾನೂನಾತ್ಮ ಪ್ರಕ್ರಿಯೆ ಹಾಗೂ ಕೃಷಿ ಉತ್ಪನ್ನಗಳಿಂದ ತಯಾರಾಗುವ ಆಹಾರದ ಸಂಸ್ಕರಣೆಯ ದೃಷ್ಟಿಕೋನ ಹಾಗೂ ಸವಾಲುಗಳು’ ಕುರಿತಾದ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ನಮ್ಮ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಕುಟುಂಬಗಳಿಗೆ ಜೀವನೋಪಾಯವಾಗಿದೆ. ಮಿಗಿಲಾಗಿ ಭಾರತದ 140 ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತಿದೆ. ಭಾರತದಲ್ಲಿ ಒಂದು ಕಾಲದಲ್ಲಿ ಆಹಾರದ ಕೊರತೆ ಇತ್ತು. ವಿದೇಶದಿಂದ ಮುಗ್ಗಲು ಗೋಧಿ ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದು ಭಾರತ ದೇಶ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದಕ್ಕೆ ಅಂದಿನ ಕಾಂಗ್ರೆಸ್ ಕಾರ್ಯಕಾಲದಲ್ಲಿ ನಡೆದ ಹಸಿರು ಕ್ರಾಂತಿಯೇ ಕಾರಣ ಎಂದು ಈಶ್ವರ್ ಖಂಡ್ರೆ ಹೇಳಿದರು.

ಕೃಷಿಯಲ್ಲಿ ಆರಂಭ ಅಂದರೆ ನೆಲ ಉಳುಮೆ ಮಾಡುವುದರಿಂದ ಹಿಡಿದು, ಬಿತ್ತಣಿಕೆ, ಪೋಷಣೆ ಮತ್ತು ಕೊಯ್ಲಿನವರೆಗಿನ ಎಲ್ಲ ಪ್ರಕ್ರಿಯೆಯಲ್ಲಿ ವೆಚ್ಚ ತಗ್ಗಿಸುವ ಬಗ್ಗೆ ಗಮನ ಹರಿಸಬೇಕಾಗಿದೆ. ಇದಕ್ಕೆ ಸಂಶೋಧಕರು, ಕೃಷಿ ವಿಜ್ಞಾನಿಗಳು ಗಮನ ಹರಿಸಬೇಕು. ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳೆ ಬೆಳೆದರೆ ಅವರಿಗೂ ಆದಾಯ ಸಿಗುತ್ತದೆ. ಆಹಾರ ಧಾನ್ಯಗಳು ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೂ ಲಭಿಸುತ್ತದೆ. ಇಂತಹ ಸಂಶೋಧನೆ ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಆರ್ಥಿಕತೆಗೆ ಬಲ:

ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ 16 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, 15 ಸಾವಿರ ಕಿ.ಮೀ. ಗ್ರಾಮೀಣ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅವಕಾಶ ಆಗುತ್ತದೆ. ರಸ್ತೆಯ ಪ್ರಗತಿಯಿಂದ ರೈತರಿಗೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ಬರುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಭಾರತ ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ನಮ್ಮ ಸವಾಲು ಈಗ ಕೃಷಿ ಸರಬರಾಜು ಸರಪಳಿಯಲ್ಲಿ ರೈತರಿಗೆ ನ್ಯಾಯಸಮ್ಮತ ಮತ್ತು ಲಾಭಾಂಶ ನೀಡುವುದನ್ನು ಖಚಿತಪಡಿಸಬೇಕಿದೆ. ರೈತರು ಉತ್ಪಾದನೆಯಲ್ಲಿ ಮಾತ್ರವಲ್ಲದೆ ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರುಕಟ್ಟೆ ಮತ್ತು ರಫ್ತುಗಳಲ್ಲಿ ಸಹ ಪಾಲುದಾರರಾಗಬೇಕು ಎಂದು ಅವರು ಹೇಳಿದರು.

ಕೊಯ್ಲೋತ್ತರ ಧಾನ್ಯ ರಕ್ಷಣೆ ಅಗತ್ಯ :

ಕೊಯ್ಲಿನ ನಂತರ ಆಹಾರ ಧಾನ್ಯ ಇಲಿಗಳ ಪಾಲಾಗದಂತೆ, ಮಳೆಗೆ ಹಾಳಾಗದಂತೆ, ಕೊಳೆಯದಂತೆ ಕಾಪಾಡುವ ಬಗ್ಗೆಯೂ ಗಂಭೀರ ಚಿಂತನೆ ಆಗಬೇಕು. ಆಹಾರ ಧಾನ್ಯ ದೀರ್ಘಕಾಲ ಹಾಳಾಗದೆ ಉಳಿಯುವಂತೆ ಮಾಡುವ ಬಗ್ಗೆ ಅನೇಕ ಅವಕಾಶ ಇದೆ. ಆದರೆ ಇದು ರೈತರಿಗೆ ಕೈಗೆಟಕುವಂತಾಗಬೇಕು ಎಂದು ಅವರು ಹೇಳಿದರು.

ಕೃಷಿಯಲ್ಲಿ ಹೆಚ್ಚಿನ ಇಳುವರಿ ಬರುವ ತಳಿಗಳ ಸಂಶೋಧನೆಯೂ ಆಗಬೇಕು. ಕೀಟಬಾಧೆಯಿಂದ ಮುಕ್ತವಾದ ಮತ್ತು ಕಡಿಮೆ ನೀರಿನಲ್ಲೂ ಬೆಳೆಯುವ ತಳಿಗಳನ್ನು ಸಂಶೋಧಿಸಿ ರೈತರಿಗೆ ತಲುಪಿಸಬೇಕು. ಭೂಮಿಯ ಫಲವತ್ತತೆಗೂ ಒತ್ತು ನೀಡಬೇಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಬರುವ ಮತ್ತು ಹೆಚ್ಚಿನ ಆದಾಯ ತರುವ ತಳಿಗಳ ಸಂಶೋಧನೆಗೆ ಕೃಷಿ ಸಂಶೋಧಕರು ಮುಂದಾಗಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದು, ಇದರ ಫಲ ಕೊನೆಯ ರೈತರಿಗೂ ತಲುಪಲಿ ಎಂದು ಈಶ್ವರ್ ಖಂಡ್ರೆ ಆಶಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ್, ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಬಿರಾದಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.