ಗದಗ: ಸಚಿವರ ಭಾಷಣ ಮಧ್ಯೆಯೇ ಬಿಜೆಪಿ ಎಂಎಲ್ಸಿ ಸಂಕನೂರ ಸಭಾತ್ಯಾಗ
ʼವಿಬಿ ಜಿ ರಾಮ್ ಜಿʼ ಹಾಗೂ ರಾಜ್ಯಪಾಲರ ಕುರಿತು ಮಾತನಾಡಿದ್ದಕ್ಕೆ ಆಕ್ಷೇಪ
ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಚ್.ಕೆ.ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಿರುವ ವೇಳೆ ವಿಬಿ ಜಿ ರಾಮ್ ಜಿ ಹಾಗೂ ರಾಜ್ಯಪಾಲರ ಕುರಿತು ಮಾತನಾಡಿದಾಗ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಘಟನೆ ನಡೆಯಿತು.
ಸಚಿವರು ತಮ್ಮ ಭಾಷಣದ ವೇಳೆ, ರಾಜ್ಯಪಾಲರು ಹಾಗೂ ಸರಕಾರಗಳ ಮಧ್ಯೆ ಸಂವಿಧಾನಿಕ ಬಿಕಟ್ಟು ಉದ್ಭವವಾಗುತ್ತಿದೆ. ಮನರೇಗಾ ಕಾನೂನು ಕೇಂದ್ರ ಸರಕಾರ ನಿರಸನಗೊಳಿಸಿದೆ. ಮನರೇಗಾ ಮರು ಸ್ಥಾಪಿಸಬೇಕು ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಕನೂರ, ಸಚಿವರು ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ಬಂದು ಕೇಂದ್ರ ಸರಕಾರ ಕೂಲಿ ಕಾರ್ಮಿಕರ ಹಕ್ಕನ್ನು ಕಸಿದುಕೊಂಡಿಲ್ಲ ಎಂದು ಹೇಳಿದರೂ, ಸಚಿವರು ಭಾಷಣ ಮುಂದುವರಿಸಿದಾಗ ಸಭಾತ್ಯಾಗ ಮಾಡಿ ವೇದಿಕೆಯಿಂದ ನಿರ್ಗಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಕನೂರ, ಕೇಂದ್ರ ಸರಕಾರ ವಿಕಸಿತ ಭಾರತ ಜಿ ರಾಮ್ ಜಿ ಕಾನೂನು ಬಡವರ, ಕೂಲಿಕಾರರ ಉದ್ಯೋಗ ಹಕ್ಕನ್ನು ಎಲ್ಲಿ ಕಸಿದುಕೊಂಡಿದೆ. ವರ್ಷಕ್ಕೆ 100 ಇದ್ದ ದಿನವನ್ನು 125 ದಿನಕ್ಕೆ ಏರಿಸಲಾಗಿದೆ. 15 ಇಲ್ಲವೇ 30 ದಿನಗಳಿಗೊಮ್ಮೆ ಆಗುತ್ತಿದ್ದ ವೇತನವನ್ನು ಕಾನೂನಿನಡಿ ವಾರಕ್ಕೊಮ್ಮೆ ವೇತನ ನೀಡುವಂತೆ ಮಾಡಿದೆ. ವೇತನ ನೀಡುವುದು ತಡವಾದರೆ ಹೆಚ್ಚಿನ ಹಣ ನೀಡಬೇಕೆಂದು ತಿಳಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಗ್ರಾಮಸಭೆಯಲ್ಲೇ ಯೋಜನೆಗಳನ್ನು ರೂಪಿಸಿ ಎಂದು ಹೇಳಲಾಗಿದೆ. ಇದು ಯಾವ ರೀತಿ ಕೂಲಿ ಕಾರ್ಮಿಕರ, ಬಡವರ ವಿರೊಧಿ ಎಂದು ಸಚಿವರು ಹೇಳಬೇಕು. ಆದರೆ, ಸಚಿವರು ಕೆವಲ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡಬಾರದು ಎಂದರು.