×
Ad

ಗದಗ | ಮನೆ ಮುಂದೆ ಹಾರ್ನ್ ಹಾಕಿದ ಆರೋಪ : ತಂದೆ-ಮಗನ ಮೇಲೆ ಚೂರಿ ಇರಿತ

Update: 2026-01-20 12:34 IST

ಗದಗ: ಮನೆ ಮುಂದೆ ವಾಹನದ ಹಾರ್ನ್ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ತಂದೆ ಮತ್ತು ಮಗನಿಗೆ ಚೂರಿನಿಂದ ಇರಿದಿರುವ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:

ಗ್ರಾಮದ ಕಂಬಳಿ ಹಾಗೂ ಚಿಕ್ಕಣ್ಣವರ ಕುಟುಂಬಗಳ ನಡುವೆ ಮೊದಲಿನಿಂದಲೂ ವೈಷಮ್ಯವಿತ್ತು ಎನ್ನಲಾಗಿದೆ. ಸೋಮವಾರ ಮನೆ ಮುಂದೆ ಹಾರ್ನ್ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಈ ವೇಳೆ ಚಿಕ್ಕಣ್ಣವರ ಕುಟುಂಬದವರು ಕಂಬಳಿ ಕುಟುಂಬದವರ ಮೇಲೆ ಚಾಕು ಹಾಗೂ ಕಬ್ಬಿಣದ ರಾಡ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಲ್ಲಿ ಕಂಬಳಿ ಕುಟುಂಬದ ಪುತ್ರ ಶರಣಬಸಪ್ಪ ಕಂಬಳಿ (17) ಹಾಗೂ ತಂದೆ ಹೂವಪ್ಪ ಕಂಬಳಿ (45) ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳ ಬಿಡಿಸಲು ಹೋದ ಸಹೋದರ ಮಲ್ಲಪ್ಪ ಕಂಬಳಿ ಅವರ ಮೇಲೂ ದಾಳಿ ನಡೆದಿದ್ದು, ಇನ್ನೊಂದು ಗುಂಪಿನ ಈರವ್ವ ಹಾಗೂ ಆಕೆಯ ಪುತ್ರ ದೊಡ್ಡ ಯಲ್ಲಪ್ಪನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡವರನ್ನು ಗದಗಿನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News