×
Ad

UAE ಸೇರಿದಂತೆ 4 ದೇಶಗಳ ಭಾರತೀಯ ಪಾಸ್‌ಪೋರ್ಟ್ ಸೇವೆಗಳ ಟೆಂಡರ್ ರದ್ದುಪಡಿಸಿದ ದಿಲ್ಲಿ ಹೈಕೋರ್ಟ್; ಹೊಸ ಟೆಂಡರ್‌ಗೆ ಆದೇಶ

Update: 2026-07-16 15:15 IST

ಸಾಂದರ್ಭಿಕ ಚಿತ್ರ 

ದುಬೈ: ಯುಎಇ ಸೇರಿದಂತೆ ವಿದೇಶಗಳಲ್ಲಿನ ಭಾರತೀಯ ಪಾಸ್‌ಪೋರ್ಟ್, ವೀಸಾ ಹಾಗೂ ಇತರೆ ಕಾನ್ಸುಲರ್ ಸೇವೆಗಳ ನಿರ್ವಹಣೆಗೆ ನೀಡಲಾಗಿದ್ದ ಹೊಸ ಗುತ್ತಿಗೆ ಪ್ರಕ್ರಿಯೆಯನ್ನು ದಿಲ್ಲಿ ಹೈಕೋರ್ಟ್ ರದ್ದುಪಡಿಸಿದೆ. ಯುಎಇ, ಕುವೈತ್, ಸಿಂಗಾಪುರ ಮತ್ತು ಆಸ್ಟ್ರೇಲಿಯಾದ ಭಾರತೀಯ ಮಿಷನ್‌ಗಳಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಯುಎಇಯಲ್ಲಿ ಅಲ್‌ಹಿಂದ್‌ಗೆ ನೀಡಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಸಂಬಂಧಿತ ಎಲ್ಲಾ ಭಾರತೀಯ ಮಿಷನ್‌ಗಳಿಗೆ ಒಂದು ತಿಂಗಳೊಳಗೆ ಹೊಸ ಟೆಂಡರ್ ಪ್ರಸ್ತಾವನೆ ಸಲ್ಲಿಸಲು ಆಹ್ವಾನ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈಗಿರುವ ಸೇವಾ ಪೂರೈಕೆದಾರರಿಗೆ ತಾತ್ಕಾಲಿಕವಾಗಿ ಸೇವೆ ಮುಂದುವರಿಸಲು ಅವಕಾಶ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಇದರಿಂದ ಯುಎಇಯಲ್ಲಿರುವ ಭಾರತೀಯರಿಗೆ ಸದ್ಯಕ್ಕೆ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ನಾಲ್ಕು ದೇಶಗಳಲ್ಲಿನ ಕಾನ್ಸುಲರ್ ಸೇವೆಗಳಿಗಾಗಿ ಒಂದು ತಿಂಗಳೊಳಗೆ ಹೊಸ ಟೆಂಡರ್ (RFP) ಆಹ್ವಾನಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ (MEA) ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ಮೌಲ್ಯಮಾಪನ ಹಂತದಲ್ಲಿ ಅನರ್ಹಗೊಂಡಿದ್ದ ಎರಡು ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಕಂಪನಿಗಳಿಗೆ ಅಂಕಗಳನ್ನು ನೀಡಿದ ಮಾನದಂಡಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ಯುಎಇಯಲ್ಲಿ ಅಲ್‌ಹಿಂದ್ ಟೂರ್ಸ್ ಆಂಡ್ ಟ್ರಾವೆಲ್ಸ್‌ಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಪಡಿಸಿ, ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ಮರುಆರಂಭಿಸಲು ಆದೇಶಿಸಿದೆ.

ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡುವವರೆಗೆ ಮಧ್ಯಂತರ ವ್ಯವಸ್ಥೆ ಕುರಿತು ಅಂತಿಮ ನಿರ್ಧಾರವನ್ನು ಕೇಂದ್ರ ಸರಕಾರ ಹಾಗೂ ಸಂಬಂಧಿತ ಭಾರತೀಯ ಮಿಷನ್‌ಗಳು ಕೈಗೊಳ್ಳಲಿವೆ.


ಜುಲೈ 1ರಿಂದ ಸೇವೆ ಆರಂಭಿಸಬೇಕಿದ್ದ ಅಲ್‌ಹಿಂದ್:

2025ರ ನವೆಂಬರ್‌ನಲ್ಲಿ ಹೊರಡಿಸಿದ್ದ ಟೆಂಡರ್ ಪ್ರಕ್ರಿಯೆಯ ಬಳಿಕ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿಯು ನಾಲ್ಕು ಅಂತಿಮ ಸ್ಪರ್ಧಿಗಳ ಪೈಕಿ ಅತಿ ಕಡಿಮೆ ಹಣಕಾಸು ಬಿಡ್ ಸಲ್ಲಿಸಿದ್ದ ಅಲ್‌ಹಿಂದ್ ಸಂಸ್ಥೆಯನ್ನು ಆಯ್ಕೆ ಮಾಡಿತ್ತು.

ಕೇರಳ ಮೂಲದ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ಸ್ ಕಡಿಮೆ ಹಣಕಾಸು ಬಿಡ್ ಸಲ್ಲಿಸಿ ಟೆಂಡರ್ ಗೆದ್ದಿದ್ದ ಹಿನ್ನೆಲೆಯಲ್ಲಿ ಜುಲೈ 1ರಿಂದ ಯುಎಇಯಲ್ಲಿ ಸೇವೆ ಆರಂಭಿಸಲು ಸಜ್ಜಾಗಿತ್ತು. ಕಂಪನಿಯು ಯುಎಇಯಾದ್ಯಂತ 16 ಸೇವಾ ಕೇಂದ್ರಗಳನ್ನು ಸಿದ್ಧಪಡಿಸಿದ್ದು, ದುಬೈಯ ಬರ್ ದುಬೈನಲ್ಲಿ 12,000 ಚದರ ಅಡಿ ವಿಸ್ತೀರ್ಣದ, 45ಕ್ಕೂ ಹೆಚ್ಚು ಕೌಂಟರ್‌ಗಳನ್ನು ಹೊಂದಿರುವ ಪ್ರಮುಖ ಕೇಂದ್ರವನ್ನೂ ಸ್ಥಾಪಿಸಿತ್ತು.


ಭಾರತೀಯ ರಾಯಭಾರ ಕಚೇರಿ-ದುಬೈ ಭಾರತೀಯ ಕಾನ್ಸುಲೇಟ್ ನಿಂದಲೇ ಸೇವೆ ಆರಂಭ:

ಜುಲೈ 1ರಿಂದ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈ ಭಾರತೀಯ ಕಾನ್ಸುಲೇಟ್ ಸೀಮಿತ ಪ್ರಮಾಣದಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಇತರೆ ಕಾನ್ಸುಲರ್ ಸೇವೆಗಳನ್ನು ನೇರವಾಗಿ ಒದಗಿಸುತ್ತಿದೆ. ಹೆಚ್ಚಿನ ಸೇವೆಗಳು ಕಡ್ಡಾಯ ಅಪಾಯಿಂಟ್‌ಮೆಂಟ್ (Appointment) ಆಧಾರದ ಮೇಲೆ ಮಾತ್ರ ನೀಡಲಾಗುತ್ತಿದೆ.

ಹೊಸ ವ್ಯವಸ್ಥೆಯಂತೆ, ಅರ್ಜಿದಾರರು book.passportindiauae.com ಪೋರ್ಟಲ್‌ನಲ್ಲಿ ಮುಂಗಡವಾಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕು. ಅಪಾಯಿಂಟ್‌ಮೆಂಟ್ ಪಡೆದಿರುವ ವ್ಯಕ್ತಿಗಳು ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಪ್ರವೇಶ ನೀಡಲಾಗುತ್ತದೆ. ಜನದಟ್ಟಣೆ ತಪ್ಪಿಸುವ ಉದ್ದೇಶದಿಂದ ಅರ್ಜಿದಾರರಿಗೆ ಮಾತ್ರ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ಪ್ರವೇಶಕ್ಕೆ ಅವಕಾಶ ಇರುತ್ತದೆ. ಆದರೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಅರ್ಜಿಗಳ ಸಂದರ್ಭದಲ್ಲಿ ಇಬ್ಬರೂ ಪೋಷಕರಿಗೂ ಪ್ರವೇಶ ನೀಡಲಾಗುತ್ತದೆ.


ನಗದು ರೂಪದಲ್ಲಿ ಸೇವಾ ಶುಲ್ಕ:

ಸೇವಾ ಶುಲ್ಕವನ್ನು ನಗದು ರೂಪದಲ್ಲಿ ಮಾತ್ರ ಪಾವತಿಸಬಹುದಾಗಿದೆ. ಕಾರ್ಡ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಪಾವತಿಸುವ ಅವಕಾಶ ಇಲ್ಲದ ಕಾರಣ, ಸಾಧ್ಯವಾದಷ್ಟು ಚಿಲ್ಲರೆ ಹಣದೊಂದಿಗೆ ಬರಲು ಅಧಿಕಾರಿಗಳು ಸೂಚಿಸಿದ್ದಾರೆ.


ನಕಲಿ ಏಜೆಂಟ್‌ಗಳ ಬಗ್ಗೆ ಎಚ್ಚರಿಕೆ:

ಅಧಿಕೃತ ಅಪಾಯಿಂಟ್‌ಮೆಂಟ್ ಹೆಸರಿನಲ್ಲಿ ಹಣ ವಸೂಲಿ ಮಾಡುವ ಅನಧಿಕೃತ ಏಜೆಂಟ್‌ಗಳಿಂದ ಎಚ್ಚರಿಕೆಯಿಂದಿರಬೇಕು ಎಂದು ಭಾರತೀಯ ಮಿಷನ್‌ಗಳು ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ನೀಡಿವೆ. ಅಧಿಕೃತ ಪೋರ್ಟಲ್ ಮೂಲಕ ಅಪಾಯಿಂಟ್‌ಮೆಂಟ್ ಪಡೆಯುವುದು ಸಂಪೂರ್ಣ ಉಚಿತವಾಗಿದ್ದು, ಈ ಸೇವೆಗೆ ಯಾವುದೇ ಮೂರನೇ ವ್ಯಕ್ತಿಗೆ ಶುಲ್ಕ ವಸೂಲಿ ಮಾಡುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಬುಧಾಬಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ವಾಕ್-ಇನ್ ಸೇವೆಯನ್ನೂ ಮುಂದುವರಿಸಲಾಗಿದೆ. ಇದೇ ವೇಳೆ, ಈ ವರ್ಷದ ಆರಂಭದಲ್ಲಿ ಭಾರತೀಯ ಸರ್ಕಾರ ಪಾಸ್‌ಪೋರ್ಟ್ ನವೀಕರಣ ಸೇರಿದಂತೆ ಹಲವು ಕಾನ್ಸುಲರ್ ಸೇವೆಗಳ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿತ್ತು.

Tags:    

Writer - ಎಂ.ಇಕ್ಬಾಲ್ ಉಚ್ಚಿಲ, ದುಬೈ

contributor

Editor - ಎಂ.ಇಕ್ಬಾಲ್ ಉಚ್ಚಿಲ, ದುಬೈ

contributor

Byline - ಎಂ.ಇಕ್ಬಾಲ್ ಉಚ್ಚಿಲ, ದುಬೈ

contributor

Similar News