ಹಾಸನ | ಸ್ನೇಹಿತೆಯರ ಜೊತೆಗಿದ್ದ ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಯುವತಿ; ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಹಾಸನ, ಸೆ.19 : ಸ್ನೇಹಿತೆಯರ ಜೊತೆ ಪಾರ್ಕ್‌ನಲ್ಲಿ ಕುಳಿತಿದ್ದ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಪವನ್ ಕೆ. (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಸೆ.17ರಂದು ಮಧ್ಯಾಹ್ನ ಪವನ್ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ. ಈ ವೇಳೆ ಓರ್ವ ಯುವತಿಯ ಕೈ ಹಿಡಿದು ಆತ್ಮೀಯವಾಗಿ ಮಾತನಾಡುತ್ತಿದ್ದ ದೃಶ್ಯವನ್ನು ಅಪರಿಚಿತ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಚಿತ್ರೀಕರಿಸಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಳು.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪವನ್ ಸಹಪಾಠಿಗಳು ಸೇರಿದಂತೆ ಅನೇಕರ ಟೀಕೆಗೆ ಗುರಿಯಾದರು. ಸ್ನೇಹಿತೆಯರಿಗೆ ಮಾನಹಾನಿ ಆಗಬಹುದೆಂದು ಆತಂಕಗೊಂಡ ಪವನ್, ವೀಡಿಯೊ ಡಿಲೀಟ್ ಮಾಡಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರೂ ಅದು ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡ ಪವನ್ ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋದ ಬಳಿಕ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆಶರಣಾಗಿದ್ದಾನೆ.
ಪವನ್ ಸಾವಿಗೆ ಕಾರಣಳಾದ ಅಪರಿಚಿತ ಯುವತಿ ಯನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮುಂದೆ ಯಾರಿಗೂ ಇಂತಹ ಮಾನಹಾನಿ ಆಗಬಾರದು, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.